ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮನುಕುಲವೇ ತಲೆ ತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯೊಬ್ಬಳ ಮೇಲೆ 8 ತಿಂಗಳ ಅವಧಿಯಲ್ಲಿ ಸುಮಾರು 80 ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬಹಿರಂಗವಾಗಿದೆ.
ಘಟನೆ ಸಂಬಂಧ ಪೊಲೀಸರು ಬಿ.ಟೆಕ್ ವಿದ್ಯಾರ್ಥಿ ಸೇರಿದಂತೆ 10 ಮಂದಿಯನ್ನು ಈಗಾಗಲೇ ಬಂಧಿಸಿದ್ದು, ಇನ್ನುಳಿದ ಆರೋಪಿಗಳ ವಿವರ ಪಡೆದುಕೊಂಡಿರುವ ಪೊಲೀಸರು ಅವರುಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮತ್ತೊಂದು ಶಾಕಿಂಗ್ ಸಂಗತಿಯೆಂದರೆ ಆರೋಪಿಗಳ ಪೈಕಿ ಓರ್ವ ಈಗ ಲಂಡನ್ ನಲ್ಲಿದ್ದಾನೆ ಎನ್ನಲಾಗಿದೆ.
ಘಟನೆಯ ವಿವರ
ಜೂನ್ 2021 ರಲ್ಲಿ ಸಂತ್ರಸ್ಥೆ ಬಾಲಕಿ ತಾಯಿ, ಕೊರೊನಾ ಸಾಂಕ್ರಾಮಿಕದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸ್ವರ್ಣ ಕುಮಾರಿ ಎಂಬ ಮಹಿಳೆಯ ಪರಿಚಯವಾಗುತ್ತದೆ. ದುರದೃಷ್ಟವಶಾತ್ ಬಾಲಕಿಯ ತಾಯಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದು, ಬಾಲಕಿಯನ್ನು ಪುಸಲಾಯಿಸಿದ ಸ್ವರ್ಣ ಕುಮಾರಿ, ಬಾಲಕಿ ತಂದೆಗೂ ಮಾಹಿತಿ ನೀಡದೆ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ.
ಬಾಲಕಿಯ ತಂದೆ 2021 ರ ಆಗಸ್ಟ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಮಾಹಿತಿ ಕಲೆ ಹಾಕಿದ್ದ ಪೊಲೀಸರು 2022 ರ ಜನವರಿಯಲ್ಲಿ ಮೊದಲ ಬಂಧನ ಮಾಡಿದ್ದರು. ನಂತರ ಮಾಹಿತಿ ಕಲೆ ಹಾಕುತ್ತಾ ಹೋದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಸ್ವರ್ಣ ಕುಮಾರಿ, ಅದರಿಂದ ಹಣ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಬಾಲಕಿ ಇನ್ನೂ ಅಪ್ರಾಪ್ತೆಯಾಗಿದ್ದ ಕಾರಣ ಕಾಮುಕರ ಗುಂಪು ಆಕೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟ ಮಾಡಿಕೊಂಡು ಹೋಗಿದೆ. ಈ 8 ತಿಂಗಳ ಅವಧಿಯಲ್ಲಿ ಆಕೆಯ ಮೇಲೆ 80 ಮಂದಿ ಅತ್ಯಾಚಾರವೆಸಗಿದ್ದಾರೆ.
ವಿಜಯವಾಡ, ಹೈದರಾಬಾದ್, ಕಾಕಿನಾಡ ಮತ್ತು ನೆಲ್ಲೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಲಾಗಿದ್ದು, ಇದೀಗ ವಿಸ್ತೃತ ತನಿಖೆ ನಡೆಸಿರುವ ಪೊಲೀಸರು ಏಪ್ರಿಲ್ 19 ರಂದು ಮತ್ತೆ 10 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಎಲ್ಲರನ್ನೂ ಹೆಡೆಮುರಿ ಕಟ್ಟಿ ನ್ಯಾಯಾಂಗ ಕಟೆಕಟೆಯಲ್ಲಿ ನಿಲ್ಲಿಸಲು ಪೊಲೀಸರು ನಿರ್ಧರಿಸಿದ್ದು, ಈಗಾಗಲೇ ಇತರರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.