ಬೆಳಗಾವಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ 108 ಕಾಮಗಾರಿಗೆ ಅನುಮೋದನೆ ನೀಡಿದ್ದ ಪತ್ರ ಬಹಿರಂಗವಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ನಿನ್ನೆ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಪಾಟೀಲ್ ಗೆ ಹಣ ನೀಡಿದ್ದ ನಾಗೇಶ್, ಅದಕ್ಕೆ ಪ್ರತಿಯಾಗಿ ಸಂತೋಷ್ ಮನೆಯನ್ನು 3 ಲಕ್ಷ ರೂಪಾಯಿಗೆ ಜಿಪಿಎ ಮಾಡಿಕೊಂಡಿದ್ದಾರೆ. ಒಂದೆಡೆ ಮನೆ ಜಿಪಿಎ, ಮತ್ತೊಂದೆಡೆ ಕಾಮಗಾರಿ ಬಿಲ್ ಆಗದಿರುವ ಒತ್ತಡಕ್ಕೆ ಸಿಲುಕಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರೆ ಎಂಬ ಅನುಮಾನ ಆರಂಭವಾಗಿದೆ.
ಈ ನಡುವೆ 108 ಕಾಮಗಾರಿಗಳ ಪಟ್ಟಿ ಸಮೇತ ಅನುಮೋದನೆಗಾಗಿ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರ ಪೊಲೀಸರಿಗೆ ಲಭ್ಯವಾಗಿದೆ. ಅನುಮೋದನೆಗೆ ಆದೇಶಿಸಲಾಗಿದೆ ಎಂದು 2022ರ ಫೆಬ್ರವರಿ 26ರಂದು ಸಹಿ ಮಾಡಿರುವ ಲೆಟರ್ ಲಭ್ಯವಾಗಿದ್ದು, ಮಾ.5ರಂದು ಆದೇಶದ ಪ್ರತಿ ನೀಡಲಾಗಿದೆ ಬರೆದು ಇಲಾಖೆಯಿಂದ ಸಹಿ ಕೂಡ ಹಾಕಲಾಗಿದೆ ಎಂದು ತಿಳಿದುಬಂದಿದೆ.