ಮಂಗಳೂರು: ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬೇಕಾದ ಪ್ರಾಧ್ಯಾಪಕರೇ ದಾರಿ ತಪ್ಪಿ ಕಂಬಿ ಎಣಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಲೇಖಕಿ, ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ನೀಡಿದ ಮೂವರು ಪ್ರಾಧ್ಯಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬುವವರಿಗೆ ಕೆಲ ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಮೂವರು ಪ್ರಾಧ್ಯಾಪಕರು, ಇದೀಗ ಜೈಲು ಪಾಲಾಗಿದ್ದಾರೆ. ಬಂಟ್ವಾಳ ಸಿದ್ಧಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿಯ ಹೆಬ್ರಿ ನಿವಾಸಿ ತಾರಾನಾಥ ಶೆಟ್ಟಿ ಹಾಗೂ ಕಾಲೇಜು ಸಂಚಾಲಕ ಬೆಳ್ತಂಗಡಿ ನಿವಾಸಿ ಪ್ರಕಾಶ್ ಶೆಣೈ ಬಂಧಿತ ಆರೋಪಿಗಳು.
ನೇಮಕಾತಿ ವಿಚಾರವಾಗಿ ಆರಂಭವಾದ ಮನಸ್ತಾಪ ಸೇಡಿಗೆ ತಿರುಗಿದೆ. ಇದೇ ಕಾರಣಕ್ಕೆ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಅವರಿಗೆ ಮೂವರು ಪ್ರಾಧ್ಯಾಪಕರು ಕಿರಿಕುಳ ನೀಡುತ್ತಿದ್ದರು. ಕಿರುಕುಳಕ್ಕೆ ಬೇಸತ್ತ ನಾಗವೇಣಿ ಮಂಗಳೂರು ಕಾಲೇಜಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೂ ಬಿಡದ ಪಾಪಿಗಳು, ಅಶ್ಲೀಲ ಪತ್ರ ಬರೆದು ಕಿರುಕುಳ ನೀಡಿದ್ದಾರೆ. ಅಲ್ಲದೇ ಸಾರ್ವಜನಿಕ ಶೌಚಾಲಯದಲ್ಲಿ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಬರೆದು ವಿಕೃತಿ ಮೆರೆದಿದ್ದಾರೆ.
ಅವಮಾನ ತಾಳಲಾರದೇ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಷಯ ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲಿಸರು ಇದೀಗ ಮೂವರು ಪ್ರಾಧ್ಯಾಪಕರನ್ನು ಬಂಧಿಸಿದ್ದಾರೆ.