ಬೆಂಗಳೂರು: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಸಮವಸ್ತ್ರ ನಿಯಮ ಕಡ್ಡಾಯವಾಗಿದೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ನಾಳೆಯಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10:15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. 6 ಲಕ್ಷದ 84 ಸಾವಿರದ 255 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರದ ಬಳಿಯ ಜೆರಾಕ್ಸ್ ಅಂಗಡಿ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ವಿದ್ಯಾರ್ಥಿಗಳು ತೆರಳಲು ಅವಕಾಶ ಕಲ್ಪಿಸಲಾಗಿದೆ.
ಹಿಜಾಬ್ ವಿವಾದದ ಪರಿಣಾಮ ದ್ವಿತೀಯ ಪಿಯು ಪರೀಕ್ಷೆ ಮೇಲೂ ಬೀಳುವ ಸಾಧ್ಯತೆ ಇದ್ದು, ಮುಂಜಾಗೃತವಾಗಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ನಿಯಮಕ್ಕೆ ಆದೇಶ ನೀಡಿದೆ. ಹೈಕೋರ್ಟ್ ಆದೇಶವನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಹಿಜಾಬ್ ಧರಿಸಿ ಬರುವವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.