ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್, ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಲಾಡ್ಜ್ ಹೆಸರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಉಲ್ಲೇಖವಾಗಿತ್ತು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕವೂ ಸಹ ಪ್ರಕರಣದ ತನಿಖೆಯ ಕಾರಣಕ್ಕೆ ಲಾಡ್ಜ್ ಹೆಸರು ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿತ್ತು.
ಈ ಹಿನ್ನಲೆಯಲ್ಲಿ ಲಾಡ್ಜ್ ಮಾಲೀಕರು, ಹೆಸರಿನ ಕಾರಣಕ್ಕೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಹೆಸರನ್ನು ಬದಲಿಸಿದ್ದರು. ಅಲ್ಲದೆ ಜ್ಯೋತಿಷಿಗಳ ಸಲಹೆಯಂತೆ ಹೋಮ-ಹವನಗಳನ್ನು ಸಹ ನೆರವೇರಿಸಿದ್ದರು.
ಇಷ್ಟಾದರೂ ಸಹ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ. ಹೆಸರು ಬದಲಾದ ಬಳಿಕವೂ ಮತ್ತೊಬ್ಬ ವ್ಯಕ್ತಿ ಮಂಗಳವಾರದಂದು ಇದೇ ಲಾಡ್ಜಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನ ಕೊಣಾಜೆಯ ಶರಣ್ ರಾಜ್ ಎಂಬವರು ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.