2 ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಸಹ ತೊಲಗಿದಂತೆ ಕಾಣುತ್ತಿಲ್ಲ. ಈಗಾಗಲೇ ಮೂರು ಅಲೆಗಳು ದೇಶವನ್ನು ಬಾಧಿಸಿದ್ದು, ಈಗ ನಾಲ್ಕನೇ ಅಲೆ ವಕ್ಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸೋಂಕು ಏರಿಕೆಯಾಗಿರುವ ಪಂಚ ರಾಜ್ಯಗಳಾದ ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಿಜೋರಾಂ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಇದರ ಮಧ್ಯೆ ಕರ್ನಾಟಕ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಬಂದಿಲ್ಲ. ಆದರೆ ಕೆಲವು ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ಇಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.