ಶಿವಮೊಗ್ಗ : ಸರ್ಕಾರದ ಮೇಲಿರುವ ಶೇ.40 ರಷ್ಟು ಕಮಿಷನ್ ಆರೋಪಗಳಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯಾವುದಾದರೂ ಇಲಾಖೆಯಲ್ಲಿ ಯಾರಾದರೂ ಶೇ.40 ರಷ್ಟು ಕಮಿಷನ್ ಪಡೆದಿರುವ ಬಗ್ಗೆ ದಾಖಲೆ ಇದ್ದರೆ, ಕೊಡಲಿ ಎಂದು ತಿರುಗೇಟು ನೀಡಿದರು.
ಬುಧವಾರ ಬೆಳಗ್ಗೆ ನಗರದ ಹರ್ಷ ದಿ ಫೆರ್ನ್ ಹೋಟೆಲ್ ನಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳು, ಈಶ್ವರಪ್ಪನವರು ದೋಷಮುಕ್ತರಾಗಿ ಬರುತ್ತಾರೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುವೆ. ಆದರೆ ಗುತ್ತಿಗೆದಾರ ಕೆಂಪ್ಪಣ್ಣ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ ದಾಖಲಾತಿ ಕೊಡಿ ಎಂದು ಕೇಳಿದರೆ ಕೊಡುತ್ತಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಒಂದು ದಾಖಲೆ ಕೇಳಿದರೆ ಕೊಡಲು ಸಿದ್ದವಿಲ್ಲದ ಇವರ ಆರೋಪ ಗಂಭೀರ ಯಾಕೆ ಎಂದರೆ ಸಂತೋಷ್ ಸಾವಾಗಿದೆ. ಯಾರ್ಯಾರೋ ಬಂದು ಗೂಬೆ ಕೂರಿಸಿ ಮಾತನಾಡುವಂತಾಗಬಾರದು ಎಂದು ವಿವರಣೆ ನೀಡಿದರು.
ಕಮಿಷನ್ ಇದೆ ಎನ್ನುವುದು ಒಂದ್ರೀತಿ ಸಾರ್ವತ್ರಿಕ ವಾದ ಆರೋಪ, ಇದಕ್ಕೆಪರಿಹಾರ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಮಿಷನ್ ಆರೋಪವನ್ನು ನಿಯಂತ್ರಿಸಲು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾವಣೆಯೇ ಮಾನದಂಡ. ಚುನಾವಣೆಯ ಅಡಿಯಲ್ಲಿ ಭ್ರಷ್ಠಾಚಾರ ನಡೆಸಿದ ಪಕ್ಷವನ್ನ ಸೋಲಿಸುವ ಮೂಲಕವೇ ಜನ ಉತ್ತರ ನೀಡುತ್ತಾರೆ. ಇದಕ್ಕೆ ತನಿಖೆ ಮಾಡಲು ಸಾಧ್ಯವಿಲ್ಲವೆಂದು ಈಶ್ವರಪ್ಪ ತಿಳಿಸಿದರು.
ಶೇ.40 ರಷ್ಟು ಕಮಿಷನ್ ಆರೋಪ ಕುರಿತು ತನಿಖೆ ಮಾಡಬಾರದೇಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ತನಿಖೆ ನಡೆಸಲು ಸಾಧ್ಯವಿಲ್ಲ. ಕಾರಣ ದಾರಿ ಮೇಲೆ ಹೋಗುವವರೆಲ್ಲಾ ಆರೋಪ ಮಾಡಿದರೆ ತನಿಖೆ ನಡೆಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಅಡಿ ಚುನಾವಣೆಯೇ ಇದಕ್ಕೆಲ್ಲಾ ಅಸ್ತ್ರ ಯಾವ ಪಕ್ಷದ ವಿರುದ್ದ ಕಮಿಷನ್ ಎಂಬ ಆರೋಪ ಕೇಳಿ ಬಂದರೆ ಅದನ್ನ ಜನ ಹೇಗೆ ಪ್ರತಿಕ್ರಿಯಸುತ್ತಾರೆ ಎಂಬುದನ್ನ ಚುನಾವಣೆಯಲ್ಲೇ ಕಾದು ನೋಡಬೇಕಿದೆ ಎಂದರು.