ಏಪ್ರಿಲ್ 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಮ್ಮ ಅನುಮಾನ, ಗೊಂದಲ ನಿವಾರಣೆ ಮಾಡಿಕೊಳ್ಳುವ ಸಲುವಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಹಾಯವಾಣಿ ದೂರವಾಣಿ ಸಂಖ್ಯೆ 080-23080864 ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆವರೆಗೂ ಕಾರ್ಯನಿರ್ವಹಿಸಲಿದ್ದು ವಿದ್ಯಾರ್ಥಿಗಳು, ಪೋಷಕರು ಕರೆ ಮಾಡಿ ತಮ್ಮ ಅನುಮಾನ ಪರಿಹರಿಸಿಕೊಳ್ಳಬಹುದಾಗಿದೆ.
ಅಲ್ಲದೆ ಹೈಕೋರ್ಟ್ ಆದೇಶದನ್ವಯ ಹಿಜಾಬ್ ಸೇರಿದಂತೆ ಇತರೆ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ತಿಳಿಸಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿಗೂ ಕೂಡ ಇದೇ ನಿಯಮ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಏಪ್ರಿಲ್ 22 ರಿಂದ ಮೇ 18 ರ ವರೆಗೆ ರಾಜ್ಯದ 1,076 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದ್ದು, ಒಟ್ಟು 6.84 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.