ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದು ಜಹಾಂಗೀರ್ಪುರಿ ಹಿಂಸಾಚಾರದ ಕುರಿತು ಶೋಭಾಯಾತ್ರೆ ಘರ್ಷಣೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 16ರಂದು ಜಹಾಂಗೀರ್ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಘರ್ಷಣೆ ಸಂಭವಿಸಿತ್ತು. ಈ ಘರ್ಷಣೆಯಲ್ಲಿ 8 ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದರು. ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಈ ಘರ್ಷಣೆ ಸಂಭವಿಸಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 148, 149, 186, 307, 323, 332, 353, 427, ಮತ್ತು 436 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಜಹಾಂಗೀರ್ಪುರಿಯಲ್ಲಿ ಹನುಮಾನ್ ಜಯಂತಿಯಂದು ಫೈರಿಂಗ್ ನಡೆಸಿದ್ದಾನೆ ಎನ್ನಲಾದ ಸೋನು ಚಿಕ್ನಾರನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸೋನು ಚಿಕ್ನಾ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು ಜಹಾಂಗೀರ್ಪುರಿಗೆ ತೆರಳಿದ್ದರು. ಆದರೆ ಇಲ್ಲಿ ಪೊಲೀಸರ ಮೇಲೆಯೆ ಚಿಕ್ನಾ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.