ಮನುಷ್ಯರಿಗೆ ದಿನಕ್ಕೆ ಕನಿಷ್ಟ 7 ಗಂಟೆಗಳ ನಿದ್ದೆ ಬೇಕು. ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ದಿನವಿಡೀ ಚಟುವಟಿಕೆಯಿಂದ ಆರೋಗ್ಯವಾಗಿ ಇರಬಹುದು. ಇದು ನಮ್ಮ ನೆನಪಿನ ಶಕ್ತಿಯನ್ನು ಕೂಡ ಚುರುಕಾಗಿಡುತ್ತದೆ.
ಆದ್ರೆ ಹೇಗಂದ್ರೆ ಹಾಗೆ ನಿದ್ರೆ ಮಾಡುವಂತಿಲ್ಲ. ಮಲಗುವ ವಿಧಾನಕ್ಕೆ ಸಂಬಂಧಪಟ್ಟಂತೆ ನಮ್ಮ ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗೆ ಮಾಡಿದ್ರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ, ಜೊತೆಗೆ ಅದೊಂದು ಆಯುರ್ವೇದ ಚಿಕಿತ್ಸೆಯಂತೆ ನಿಮ್ಮ ಆರೋಗ್ಯವನ್ನೂ ಕಾಪಾಡುತ್ತೆ.
ಹಗಲು ಹೊತ್ತಿನಲ್ಲಿ ಮಲಗಬೇಡಿ : ಗೃಹಿಣಿಯರು, ಶಿಫ್ಟ್ ಪ್ರಕಾರ ಕೆಲಸ ಮಾಡುವವರು ಸಾಮಾನ್ಯವಾಗಿ ಹಗಲಿನಲ್ಲಿ ಮಲಗ್ತಾರೆ. ಆದ್ರೆ ಶಾಸ್ತ್ರದ ಪ್ರಕಾರ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಬಾರದು. ಇದರಿಂದ ಹಲವು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆಯುರ್ವೇದದ ಪ್ರಕಾರ ಹಗಲಿನಲ್ಲಿ ನಿದ್ದೆ ಮಾಡಿದ್ರೆ ಬಹುಬೇಗನೆ ಶೀತದಿಂದ ಬಳಲುತ್ತೀರಾ. ಈ ಶೀತ ಉಸಿರಾಟದ ಸಮಸ್ಯೆ ತರುತ್ತದೆ, ನಂತರ ನಿಮ್ಮ ಶ್ವಾಸಕೋಶವನ್ನೇ ಹಾಳುಮಾಡುತ್ತದೆ.
ಸಂಜೆ ನಿದ್ದೆ : ಹಿಂದು ಗ್ರಂಥಗಳ ಪ್ರಕಾರ ಸಂಜೆ ಸಮಯದಲ್ಲಿ ನಿದ್ರೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಲಕ್ಷ್ಮಿದೇವಿ ಮುಜುಗರಕ್ಕೀಡಾಗುತ್ತಾಳಂತೆ, ಹಣಕಾಸಿನ ತೊಂದರೆ ಕೂಡ ಕಾಣಿಸಿಕೊಳ್ಳುತ್ತದೆ.
ರಾತ್ರಿ ತಡವಾಗಿ ಮಲಗುವುದು : ನಮ್ಮ ದೇಹ ಕೂಡ ಗಡಿಯಾರದಂತೆ ಕಾರ್ಯ ನಿರ್ವಹಿಸುತ್ತದೆ. ರಾತ್ರಿ ತಡವಾಗಿ ಮಲಗುವುದರಿಂದ ಇದಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹದಂತ ಸಮಸ್ಯೆಗಳು ಶುರುವಾಗುತ್ತವೆ. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಹಾಗಾಗಿ ತಡವಾಗಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಡವಾಗಿ ಮಲಗುವ ಅಭ್ಯಾಸ ನಿಮ್ಮ ಜಾತಕದಲ್ಲಿರುವ ಚಂದ್ರನನ್ನು ಕ್ಷೋಭೆಗೊಳಿಸುತ್ತದೆ. ಅದರಿಂದ ನಿಮ್ಮಲ್ಲಿ ಮಾನಸಿಕ ಅಸ್ವಸ್ಥತೆ ಕೂಡ ಉಂಟಾಗಬಹುದು.
ಹಾಗಾಗಿ ಬೇಗ ಮಲಗಿ, ಬೇಗ ಏಳಿ. ಹಗಲಲ್ಲಿ ಅಥವಾ ಮುಸ್ಸಂಜೆ ವೇಳೆ ನಿದ್ದೆ ಮಾಡುವ ಹವ್ಯಾಸವಿದ್ರೆ ಅದಕ್ಕೆ ಗುಡ್ ಬೈ ಹೇಳಿ.