ಭೋಪಾಲ್: ದೇಶದಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದ್ದಂತೆ, ಇಲ್ಲೊಂದೆಡೆ ಮುಸ್ಲಿಂ ಬಾಂಧವರು ಸಾಮರಸ್ಯ ಮೆರೆದಿದ್ದಾರೆ.
ಭೋಪಾಲ್ನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಮುಸ್ಲಿಮ್ ಬಾಂಧವರು ಪುಷ್ಪವೃಷ್ಟಿಗೈದಿದ್ದಾರೆ. ಹನುಮ ಜಯಂತಿ ಮೆರವಣಿಗೆಯು ಭೋಪಾಲ್ನ ಚಾರ್ ಬತ್ತಿ ಪ್ರದೇಶವನ್ನು ತಲುಪುತ್ತಿದ್ದಂತೆ ಪುಷ್ಪವೃಷ್ಟಿ ಮಾಡಲಾಗಿದೆ.
ಶನಿವಾರ ಸಂಜೆ ಆಕಾಶದಿಂದ ಡ್ರೋನ್ ಕ್ಯಾಮರಾಗಳ ಬಹು-ಹಂತದ ಭದ್ರತೆ ಮತ್ತು ಪೊಲೀಸರ ಭದ್ರತೆಯ ನಡುವೆ, ಮುಸ್ಲಿಂ ಸಮುದಾಯದ ಮೆರವಣಿಗೆಯನ್ನು ಭವ್ಯವಾಗಿ ಸ್ವಾಗತಿಸಿದ್ದಾರೆ. ಭೋಪಾಲ್ ಮಾತ್ರವಲ್ಲ, ರಾಜ್ಯದ ಇತರ ಹಲವು ಭಾಗಗಳಲ್ಲಿಯೂ ಮುಸ್ಲಿಮರು ಹನುಮನ ಶೋಭಾ ಯಾತ್ರೆಯನ್ನು ಹೂವಿನೊಂದಿಗೆ ಸ್ವಾಗತಿಸಿದ್ದಾರೆ.
ಭೋಪಾಲ್ನಲ್ಲಿ ಭಗವಾನ್ ಹನುಮಂತನ ಘೋಷಣೆಗಳ ನಡುವೆ ಮುಸ್ಲಿಮ್ ಸಮುದಾಯದವರ ಮನೆಗಳ ಮೇಲ್ಛಾವಣಿ ಮತ್ತು ಬಾಲ್ಕನಿಗಳಿಂದ ಹೂವುಗಳನ್ನು ಸುರಿಸಲಾಯಿತು. ರಸ್ತೆಗಳು ಮತ್ತು ಕಿರಿದಾದ ಬೀದಿಗಳಲ್ಲಿ ಎರಡೂ ಧರ್ಮೀಯರು ತಮ್ಮ ಕೈಯಲ್ಲಿ ಹೂವುಗಳನ್ನು ತುಂಬಿದ್ದರು. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಪ್ರಿಲ್ 10 ರಂದು ರಾಮನವಮಿ ಆಚರಣೆಯ ಸಂದರ್ಭದಲ್ಲಿ ಖಾರ್ಗೋನೆ ಮತ್ತು ಬರ್ವಾನಿ ಎಂಬ ಎರಡು ಜಿಲ್ಲೆಗಳು ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾದ ಕೆಲವು ದಿನಗಳ ನಂತರ ಜನರು ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ.