ಫತೇಹಾಬಾದ್: ಒಮ್ಮತದ ಲೈಂಗಿಕ ಸಂಬಂಧವು ಅತ್ಯಾಚಾರವಾಗುವುದಿಲ್ಲ ಎಂದು ಫತೇಹಾಬಾದ್ ನ್ಯಾಯಾಲಯ ತೀರ್ಪು ನೀಡಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ತ್ವರಿತ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ. ಒಮ್ಮತದ ಸಂಬಂಧವು ಅತ್ಯಾಚಾರವಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಸಂತ್ರಸ್ತೆ ಆರೋಪಿಯ ಕ್ಯಾಂಟೀನ್ನಲ್ಲಿ ಹಲವು ತಿಂಗಳು ಕೆಲಸ ಮಾಡುತ್ತಿದ್ದಳು. ಈಗಾಗಲೇ ಮದುವೆಯಾಗಿದ್ದರೂ ಆರೋಪಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಪರಸ್ಪರ ಸಂಬಂಧಕ್ಕಾಗಿ ಶರಣಾಗುವ ಮುನ್ನ ಕ್ಯಾಂಟೀನ್ಗೆ ಬರುವ ಆರೋಪಿ ಪರಿಚಯಸ್ಥರಿಂದ ಆತ ಬ್ರಹ್ಮಚಾರಿಯೇ ಅಥವಾ ವಿವಾಹಿತನೇ ಎಂದು ಮಾಹಿತಿ ಪಡೆಯುವುದು ಸಂತ್ರಸ್ತೆಯ ಜವಾಬ್ದಾರಿಯಾಗಿತ್ತು. ಸಂತ್ರಸ್ತೆಯ ನಡವಳಿಕೆಯು ಆಕೆ ಒಮ್ಮತದ ಸಂಬಂಧವನ್ನು ಹೊಂದಿದ್ದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜೂನ್ 15, 2019 ರಂದು, ತೋಹಣ ಪೊಲೀಸರು ವ್ಯಕ್ತಿಯ ವಿರುದ್ಧ ಸೆಕ್ಷನ್ 313, 328, 376, 506 ಮತ್ತು ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಕ್ಯಾಂಟೀನ್ ಗೆ ಕೆಲಸಕ್ಕೆ ಹೋಗಿದ್ದ ಸಂತ್ರಸ್ತೆಗೆ ಜ್ಯೂಸ್ ಕುಡಿಸಲಾಗಿತ್ತು. ಇದರಿಂದ ಆಕೆ ಮೂರ್ಛೆ ಹೋಗಿದ್ದಳು. ಈ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರ ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಆಕೆ ಗರ್ಭಿಣಿಯಾದಾಗ ಆರೋಪಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಇನ್ನು ಪ್ರಕರಣದ ವಿಚಾರಣೆ ನಡೆಸಿದಾಗ ಸಂತ್ರಸ್ತೆಗೆ ಆರೋಪಿ ಅದಾಗಲೇ ವಿವಾಹವಾಗಿತ್ತು ಎಂಬುದು ತಿಳಿದಿತ್ತು. ಅಲ್ಲದೆ ಆಕೆ ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ಹೊಂದಿದ್ದಳು ಎಂದು ಸಾಬೀತಾಗಿದೆ. ಹೀಗಾಗಿ ಕೋರ್ಟ್ ಸಮ್ಮತಿಯ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ ಎಂದು ತೀರ್ಪು ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದೆ.