ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ಶುಕ್ರವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾವಿರಾರು ಬೆಂಬಲಿಗರೊಂದಿಗೆ ಶಿವಮೊಗ್ಗದಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿನ ಸಿಎಂ ಅಧಿಕೃತ ನಿವಾಸಕ್ಕೆ ಆಗಮಿಸಿದ ಈಶ್ವರಪ್ಪ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗುವ ಮುನ್ನ ವಾಟ್ಸಾಪ್ ಸಂದೇಶವೊಂದನ್ನು ಕಳಿಸಿದ್ದು, ಅದರಲ್ಲಿ ಸಚಿವ ಈಶ್ವರಪ್ಪನವರೇ ನನ್ನ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದರು. ಅಲ್ಲದೇ ಕಾಮಗಾರಿ ಬಿಲ್ ಪಡೆಯಲು ಪ್ರಯತ್ನಿಸಿದ ವೇಳೆ ಈಶ್ವರಪ್ಪ ತಮ್ಮ ಆಪ್ತರ ಮೂಲಕ ಶೇ.40 ಕಮೀಷನ್ ಗೆ ಬೇಡಿಕೆಯಿಟ್ಟಿದ್ದರು ಎಂದಿದ್ದರು.
ಈ ಹಿನ್ನಲೆಯಲ್ಲಿ ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್, ಈಗ ಮತ್ತೊಂದು ಬೇಡಿಕೆ ಮುಂದಿಟ್ಟಿದೆ. ಈಶ್ವರಪ್ಪ ವಿರುದ್ದ ಶೇ.40 ಕಮೀಷನ್ ಆರೋಪ ಕೇಳಿ ಬಂದಿರುವ ಕಾರಣ ಅವರ ವಿರುದ್ದ ಭ್ರಷ್ಟಾಚಾರ ವಿರೋಧಿ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸುತ್ತಿದೆ. ಇಂದೂ ಕೂಡಾ ಕಾಂಗ್ರೆಸ್ ಹೋರಾಟ ಮುಂದುವರೆಯಲಿದ್ದು, ಈಗಾಗಲೇ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ನಲ್ಲಿ ಉಡುಪಿ ಪೊಲೀಸರು ಈಶ್ವರಪ್ಪ ವಿರುದ್ದ ಪ್ರಕರಣ ದಾಖಲಿಸಿದ್ದು, ಈಗ ಭ್ರಷ್ಟಾಚಾರ ವಿರೋಧಿ ಕಾಯ್ದೆ ಅನ್ವಯವೂ ಪ್ರಕರಣ ದಾಖಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.