ರಾಜಸ್ಥಾನದ ಭಿಲ್ವಾರದಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದ ದುರ್ಗಾ ಶಂಕರ್ ಮೀನಾ, ಕೊರೊನಾ ಪೆಂಡಮಿಕ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ರು. ನಂತರ ಜೀವನ ನಿರ್ವಹಣೆಗಾಗಿ Zomato ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ರು. ಆದ್ರೀಗ ಒಂದೇ ಒಂದು ಆರ್ಡರ್‌ನಿಂದಾಗಿ ದುರ್ಗಾ ಶಂಕರ್, ಟ್ವಿಟ್ಟರ್‌ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಬಿಟ್ಟಿದ್ದಾರೆ.
18 ವರ್ಷದ ಯುವಕ ಆದಿತ್ಯ ಶರ್ಮಾ ಎಂಬಾತ ಝೊಮೆಟೋ ಮೂಲಕ ತಂಪು ಪಾನೀಯ ಆರ್ಡರ್ ಮಾಡಿದ್ದ. ಅದನ್ನು ಡೆಲಿವರಿ ಮಾಡಲು ದುರ್ಗಾ ಶಂಕರ್ ತಮ್ಮ ಸೈಕಲ್‌ನಲ್ಲಿ ಬಂದಿದ್ದರು. 42 ಡಿಗ್ರಿ ಉಷ್ಣಾಂಶವಿದ್ದರೂ ತಮ್ಮ ಸೈಕಲ್‌ನಲ್ಲಿ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸ್ತಾ ಇದ್ದ ದುರ್ಗಾ ಶಂಕರ್ ಅವರನ್ನು ನೋಡಿ ಆದಿತ್ಯ ಶರ್ಮಾ ಅಚ್ಚರಿಪಟ್ಟಿದ್ದಾನೆ. ಬಿ.ಕಾಂ ಓದಿರೋ ದುರ್ಗಾಶಂಕರ್ ಕೆಲಸ ಕಳೆದುಕೊಂಡಿರೋ ವಿಚಾರ ತಿಳಿದು ಆದಿತ್ಯ ಶರ್ಮಾಗೆ ಬೇಸರವಾಗಿತ್ತು.
ಈ ಘಟನೆಯ ಬಗ್ಗೆ ಆದಿತ್ಯ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ದುರ್ಗಾ ಶಂಕರ್‌ಗೆ ಈಗ 31 ವರ್ಷ. ಕಳೆದ 12 ವರ್ಷಗಳಿಂದ ಟೀಚರ್ ಆಗಿದ್ದ ಅವರೀಗ 4 ತಿಂಗಳುಗಳಿಂದ ಡೆಲಿವರಿ ಬಾಯ್ ಕೆಲಸ ಮಾಡ್ತಿದ್ದಾರೆ. ಅವರ ಫೋಟೋವನ್ನ ಕೂಡ ಆದಿತ್ಯ ಜಾಲತಾಣದಲ್ಲಿ ಹಾಕಿದ್ದಾನೆ.
ಸಾಲ ಮಾಡಿ ಒಂದು ಬೈಕ್ ಕೊಂಡುಕೊಂಡರೆ ಡೆಲಿವರಿ ಕೆಲಸ ಸುಲಭವಾಗುತ್ತದೆ ಅನ್ನೋದು ದುರ್ಗಾ ಆಸೆಯಾಗಿತ್ತು. ಆದ್ರೆ ಹಣವಿಲ್ಲದೇ ಇದ್ದಿದ್ರಿಂದ ಬೈಕ್‌ಗೆ ಡೌನ್ ಪೇಮೆಂಟ್ ಮಾಡಿ ಎಂದು ಆದಿತ್ಯ ಬಳಿ ಮನವಿ ಮಾಡಿಕೊಂಡಿದ್ದ. ಬಳಿಕ ಸಾಲ ತೀರಿಸುವುದಾಗಿ ಹೇಳಿದ್ದ. ಜೊತೆಗೊಂದು ಲ್ಯಾಪ್ಟಾಪ್ ಕೊಂಡುಕೊಂಡು ಆನ್‌ಲೈನ್ ಪಾಠ ಮಾಡುವ ಇಂಗಿತ ವ್ಯಕ್ತಪಡಿಸಿದ್ದ.
ಇದನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದ ಆದಿತ್ಯ ಶರ್ಮಾ, ಕ್ರೌಡ್ ಫಂಡಿಂಗ್ ಮೂಲಕ 75,000 ರೂಪಾಯಿ ಸಂಗ್ರಹಿಸಲು ನಿರ್ಧರಿಸಿದ್ದಾನೆ. ಸಹಾಯ ಮಾಡುವಂತೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಇದಾಗಿ ಕೇವಲ 2 ಗಂಟೆಗಳಲ್ಲಿ 1.90 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಆ ಹಣದಲ್ಲಿ 90,000 ರೂಪಾಯಿ ಕೊಟ್ಟು ದುರ್ಗಾಗೆ ಹೊಸ ಸ್ಪ್ಲೆಂಡರ್ ಬೈಕ್ ತಂದುಕೊಟ್ಟಿದ್ದಾನೆ. ಉಳಿದ ಹಣವನ್ನು ಸಾಲ ಮರುಪಾವತಿಗಾಗಿ ಕೊಟ್ಟಿದ್ದಾನೆ. ಆದಿತ್ಯ ಶರ್ಮಾ ಮಾಡಿರೋ ಈ ಕೆಲಸವನ್ನ ನೆಟ್ಟಿಗರು ಶ್ಲಾಘಿಸಿದ್ದಾರೆ.