ಸಚಿವ ಈಶ್ವರಪ್ಪ ವಿರುದ್ದ ಶೇ.40 ಕಮೀಷನ್ ಆರೋಪ ಹೊರೆಸಿ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ಇಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಕಳುಹಿಸಿದ್ದ ವಾಟ್ಸಾಪ್ ಸಂದೇಶದಲ್ಲಿ ಸಂತೋಷ್ ಪಾಟೀಲ್, ತನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದು, ಈ ಹಿನ್ನಲೆಯಲ್ಲಿ ಈಶ್ವರಪ್ಪ ವಿರುದ್ದ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರಪ್ಪ ವಿರುದ್ದ ಆರೋಪ ಕೇಳಿ ಬಂದಿರುವ ಕಾರಣ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಜೊತೆಗೆ ಈಶ್ವರಪ್ಪ ಬಂಧನವಾಗಬೇಕೆಂದು ಒತ್ತಾಯಿಸಲಾಗುತ್ತಿದೆ.
ಇಂದೂ ಕೂಡಾ ರಾಜ್ಯದಾದ್ಯಂತ ಪ್ರತಿಭಟನೆ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆನ್ನಲಾಗಿದೆ.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಬಿಗಿ ಬಂದೋಬಸ್ತ್ ಹಾಕಲಾಗಿದ್ದು, ಡಿಸಿಪಿ ಅನುಚೇತ್ ಅವರ ನೇತೃತ್ವದಲ್ಲಿ 250 ಮಂದಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.