ಪಾರ್ಕಿಂಗ್ ಸಮಸ್ಯೆ ಎಲ್ಲಾ ಕಡೆ ಇದೆ. ಶಾಪಿಂಗ್‌ಗೆ ಅಂತ ಸ್ವಂತ ವಾಹನದಲ್ಲಿ ಮಾರ್ಕೆಟ್‌ಗೆ ಹೋದ್ರೆ ಅದನ್ನು ಎಲ್ಲಿ ಪಾರ್ಕ್ ಮಾಡೋದು ಅನ್ನೋದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಆದ್ರೆ ಈ ಸಮಸ್ಯೆ ಈಗ ಚಿಟಿಕೆ ಹೊಡೆಯೋದ್ರಲ್ಲಿ ಪರಿಹಾರವಾಗಲಿದೆ.
ಮನೆಯಿಂದ ಹೊರಡುವ ಮುನ್ನವೇ ನೀವು ಆನ್‌ಲೈನ್ ಪಾರ್ಕಿಂಗ್ ಸ್ಲಾಟ್‌ಗಳನ್ನು ಬುಕ್ ಮಾಡಬಹುದು. ನೊಯ್ಡಾದಲ್ಲಿ ಇಂಥದ್ದೊಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗ್ತಿದೆ. ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿತು ಮಹೇಶ್ವರಿ ಇದಕ್ಕಾಗಿ ‘ನೋಯ್ಡಾ ಅಥಾರಿಟಿ ಪಾರ್ಕ್ ಸ್ಮಾರ್ಟ್’ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ.
ಮೊದಲೇ ಸ್ಲಾಟ್ ಬುಕ್ಕಿಂಗ್ ಮಾಡುವುದರಿಂದ ಪಾರ್ಕಿಂಗ್ ಕಿರಿಕಿರಿ ಇರುವುದಿಲ್ಲ. ಜೊತೆಗೆ ಈ ಆ್ಯಪ್ ಮೂಲಕ ಬುಕಿಂಗ್ ಮಾಡಿದ್ರೆ ಶೇ.10ರಷ್ಟು ಡಿಸ್ಕೌಂಟ್ ಕೂಡ ಸಿಗುತ್ತದೆ. ಆ್ಯಪ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಮಲ್ಟಿ ಲೆವೆಲ್ ಪಾರ್ಕಿಂಗ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಎರಡನೇ ಹಂತದಲ್ಲಿ ಸರ್ಫೇಸ್ ಪಾರ್ಕಿಂಗ್ ಅನ್ನು ಕೂಡ ಸೇರಿಸಲಾಗುತ್ತದೆ.
ಈ ಸೌಲಭ್ಯ ಆಪಲ್ ಮತ್ತು ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಲಭ್ಯವಿದೆ. ನಾಲ್ಕು ಚಕ್ರದ ವಾಹನಗಳಿಗೆ 2 ಗಂಟೆ ಪಾರ್ಕಿಂಗ್ ದರ 20 ರೂಪಾಯಿ. ನಂತರ ಗಂಟೆಗೆ 10 ರೂಪಾಯಿಯಂತೆ ಗರಿಷ್ಠ 80 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಕ್ಕೆ ಎರಡು ಗಂಟೆಗಳ ಶುಲ್ಕ 10 ರೂಪಾಯಿ. ಸೆಕ್ಟರ್ -18ರಲ್ಲಿ ನಾಲ್ಕು ಚಕ್ರದ ವಾಹನವನ್ನ ಎರಡು ಗಂಟೆ ಪಾರ್ಕಿಂಗ್ ಮಾಡಬೇಕೆಂದರೆ 30 ರೂಪಾಯಿ ಶುಲ್ಕ ಪಾವತಿಸಬೇಕು.
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಮೊಬೈಲ್ ಸಂಖ್ಯೆ ಮತ್ತು ವೇರಿಫಿಕೇಶನ್ ಕೋಡ್ ನಮೂದಿಸಿದ ನಂತರ ಅದರಲ್ಲಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನಗಳ ಸಂಖ್ಯೆಯನ್ನು ನಮೂದಿಸಿ. ವಾಹನದ ಸಂಖ್ಯೆ ಮತ್ತು ಮಾದರಿಯನ್ನು ಮಾತ್ರ ಅಲ್ಲಿ ಭರ್ತಿ ಮಾಡಬೇಕು. ಒಂದೇ ಬಾರಿಗೆ ನಾಲ್ಕು ವಾಹನಗಳನ್ನು ಪಾರ್ಕ್ ಮಾಡುವ ಸೌಲಭ್ಯವನ್ನು ಆ್ಯಪ್‌ನಲ್ಲಿ ನೀಡಲಾಗಿದೆ.