ಇಲ್ಲೊಂದೆಡೆ ಮಹಿಳೆಯರ ಸಂಖ್ಯೆಗಿಂತ ಪುರುಷರು ಜಾಸ್ತಿ ಇದ್ದು, ವಿವಾಹ ಬಂಧನಕ್ಕೆ ಒಳಗಾಗಲು ಯುವತಿಯರೇ ಸಿಗುತ್ತಿಲ್ಲ. ಇದರಿಂದ ತಲೆಕೆಡಿಸಿಕೊಂಡಿರುವ ಈ ಸಮುದಾಯ ಅನಾಥಶ್ರಮಗಳತ್ತ ಮುಖ ಮಾಡುತ್ತಿವೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭೂಸಾವಲ್ ಪ್ರದೇಶದಲ್ಲಿ ಲೇವಾ ಪಾಟೀಲ ಸಮುದಾಯವು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಸುಮಾರು ಅರ್ಧದಷ್ಟು ಯುವಕರು 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವಿವಾಹಿತರಾಗಿದ್ದಾರೆ. ಅರ್ಹ ಪುರುಷರ ಸಂಖ್ಯೆಯು ನಿರೀಕ್ಷಿತ ವಧುಗಳಿಗಿಂತ ಹೆಚ್ಚಾಗಿದೆ.
ಈ ಸಮಸ್ಯೆಗೆ ಪರಿಹಾರವಾಗಿ ಲೇವಾ ಪಾಟೀಲ್ ಸಮುದಾಯ ತಮ್ಮ ಅವಿವಾಹಿತ ಯುವಕರಿಗೆ ಮದುವೆ ಮಾಡಲು ಅನಾಥಾಶ್ರಮಗಳಿಂದ ಹುಡುಗಿ ಹುಡುಕುತ್ತಿವೆ. ಈ ಯುವತಿಯರ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಲು, ಮದುವೆಯಾಗುವ ಯುವಕರು ತಮ್ಮ ಆಸ್ತಿಯಲ್ಲಿ ಶೇ.30 ರಿಂದ ಶೇ.50ರಷ್ಟನ್ನು ತಮ್ಮ ವಧುವಿನ ಹೆಸರಿನಲ್ಲಿ ಮದುವೆಗೆ ಮುಂಚಿತವಾಗಿ ಬರೆಯುವಂತೆ ಕೇಳಿಕೊಳ್ಳಲಾಗಿದೆ.
ಭೋರ್ಗಾಂವ್ ಲೇವಾ ಪಾಟೀಲ ಸಮುದಾಯದ ಯುವಕರಿಗೆ ವಧುವನ್ನು ಹುಡುಕುವುದು ಬಹಳ ದಿನಗಳಿಂದ ದುಸ್ತರವಾಗಿತ್ತು. ಈ ವರ್ಷ 625 ಪುರುಷರು ವಿವಾಹಕ್ಕಾಗಿ ನೋಂದಾಯಿಸಿಕೊಂಡಿದ್ದರೆ, ವಧುಗಳ ಸಂಖ್ಯೆ ಇದ್ದಿದ್ದು ಕೇವಲ 190 ಮಾತ್ರ. ಕಳೆದ ಕೆಲವು ವರ್ಷಗಳಿಂದ ವಧು-ವರರ ಸಂಖ್ಯೆಯ ನಡುವೆ ಸಾಕಷ್ಟು ಅಂತರವಿದೆ.
ಅನಾಥಾಶ್ರಮದಲ್ಲಿರುವ ಯುವತಿಯರಿಗೆ ಹೊಸ ಬಾಳು ನೀಡುವ ಮುಖಾಂತರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಸಮೀಪದ ಚಾಲೀಸ್‌ಗಾಂವ್ ಗ್ರಾಮದಲ್ಲಿ ಈಗಾಗಲೇ ಇಂತಹ ಮದುವೆಗಳನ್ನು ಏರ್ಪಡಿಸಲಾಗಿದೆ.
ಕಾನೂನು ಅನುಮತಿ ದೊರೆತರೆ ಅನಾಥಾಶ್ರಮದ ಯುವತಿಯರು ಲೇವಾ ಪಾಟೀಲ ಸಮುದಾಯದ ಯುವಕರನ್ನು ಮದುವೆಯಾಗಬಹುದು. ಸಾಮಾಜಿಕ ಭದ್ರತೆ ಮೇರೆಗೆ ವರನ ಆಸ್ತಿಯಲ್ಲಿ ಶೇ.30 ರಿಂದ 50ರಷ್ಟನ್ನು ವಧುವಿನ ಹೆಸರಿನಲ್ಲಿ ನೋಂದಾಯಿಸಬೇಕಾಗುತ್ತದೆ. ಈ ಷರತ್ತು ಪೂರೈಸಿದರೆ ಮಾತ್ರ ಮದುವೆಯಾಗಬಹುದು.