ಚೆನ್ನೈ: ವಿಲಕ್ಷಣ ಘಟನೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್ಟಾಪ್ಗಳನ್ನು ಕದಿಯುತ್ತಿದ್ದ 25 ವರ್ಷದ ಯುವಕನನ್ನು ವಾಷರ್ಮೆನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ಈತ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗಳನ್ನು ಮಾತ್ರ ಕದಿಯುತ್ತಿದ್ದ. ಕಾರಣ ಕೇಳಿದ್ರೆ ಖಂಡಿತಾ ನೀವು ನಗ್ತೀರಾ..! ಈತ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ, ಆಕೆ ಈತನೊಂದಿಗೆ ಸಂಬಂಧ ಕಡಿದುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಆತ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗಳನ್ನು ಗುರಿಯಾಗಿಸಿಕೊಂಡಿದ್ದ. ದೇಶದಾದ್ಯಂತ ಹಲವಾರು ಮೆಡಿಕಲ್ ಕಾಲೇಜುಗಳಲ್ಲಿ ಈತ ಲ್ಯಾಪ್ ಟಾಪ್ ಗಳನ್ನು ಎಗರಿಸಿದ್ದಾನೆ.
ತಿರುವರೂರು ಜಿಲ್ಲೆಯ ಕೆ. ತಮಿಳ್ಸೆಲ್ವನ್ ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವೀಧರನಾಗಿದ್ದಾನೆ. ಪದವಿಗೂ ಮುನ್ನವೇ ಈತ ಲ್ಯಾಪ್ಟಾಪ್ಗಳನ್ನು ಕದಿಯಲು ಆರಂಭಿಸಿದ್ದ. ಬಳಿಕ ಅದನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ.
ದೇಶದೆಲ್ಲೆಡೆ ಈತ ಲ್ಯಾಪ್ ಟಾಪ್ ಗಳನ್ನು ಕದ್ದಿದ್ದಾನೆ. ಗುಜರಾತಿನ ಜಾಮ್ ನಗರ್, ಕೇರಳದ ಕಣ್ಣೂರು, ದೆಹಲಿ, ಬೆಂಗಳೂರು, ತೆಲಂಗಾಣದ ಹೈದರಾಬಾದ್, ಆಂಧ್ರದ ಕಾಕಿನಾಡ ಮತ್ತು ವಿಶಾಖಪಟ್ಟಣಂ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಒಡಿಸ್ಸಾದ ಭುವನೇಶ್ವರ್, ರಾಜಸ್ಥಾನದ ಜೈಪುರ ಮುಂತಾದ ವೈದ್ಯಕೀಯ ಕಾಲೇಜುಗಳಲ್ಲಿ ತಮಿಳ್ಸೆಲ್ವನ್ ಲೂಟಿ ಮಾಡಿದ್ದಾನೆ.
ಫೆಬ್ರವರಿಯಲ್ಲಿ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಯಲ್ಲಿ ಎರಡು ಲ್ಯಾಪ್ಟಾಪ್ಗಳು ನಾಪತ್ತೆಯಾಗಿದ್ದರೆ, ಶುಕ್ರವಾರ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಮತ್ತೆರಡು ಲ್ಯಾಪ್ಟಾಪ್ಗಳು ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದವು.
ಪ್ರಕರಣ ದಾಖಲಿಸಿಕೊಂಡಿರುವ ವಾಷರ್ಮೆನ್ಪೇಟೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಆತನಿಂದ 31 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.