ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು ಸಮೃದ್ಧಿಯಾಗಿ ಬೆಳೆಯಲು ನೆರವಾಗುತ್ತದೆ.
ಮೆಹಂದಿ ಪ್ರಯೋಜನ ಅನೇಕರಿಗೆ ತಿಳಿದಿದೆ. ಆದ್ರೆ ಹೇಗೆ ಉಪಯೋಗಿಸಬೇಕೆನ್ನುವುದು ಗೊತ್ತಿಲ್ಲ. ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಗುಣ ಇರುವ ಈ ಮೆಹಂದಿಯನ್ನು ಪ್ರೋಟೀನ್ ಅಥವಾ ವಿಟಮಿನ್ ಇ ಅಂಶವಿರುವ ಪದಾರ್ಥದೊಂದಿಗೆ ಸೇರಿಸಿಯೇ ತಲೆಗೆ ಹಚ್ಚಿಕೊಳ್ಳಬೇಕು.
ಮೆಹಂದಿಯನ್ನು ಈ ಕೆಳಗಿನ ರೀತಿಯಲ್ಲಿ ಉಪಯೋಗಿಸಿದ್ರೆ ಒಳ್ಳೆಯದು.
ಎರಡು ಚಮಚ ಮೆಹಂದಿ ಪುಡಿ, ಒಂದು ಚಮಚ ಆಲಿವ್ ಆಯಿಲ್, ಒಂದು ಚಮಚ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮಿಕ್ಸ್ ಮಾಡಿ. ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತರ ಸ್ವಲ್ಪ ಬಿಸಿ ಇರುವ ನೀರಿನಲ್ಲಿ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಒಣಗಿದ ಹಾಗೆ ಕಾಣುವುದಿಲ್ಲ. ಪೋಷಕಾಂಶ ಕೂಡ ಸಿಗುತ್ತದೆ.
ಮೆಹಂದಿಯ ಜೊತೆ ನಿಂಬೆ ರಸ ಹಾಗೂ ಮೊಸರನ್ನು ಸೇರಿಸಿ ಹಚ್ಚಿಕೊಳ್ಳಬೇಕು. ಮೆಹಂದಿ ಜೊತೆ ನಿಂಬೆ ರಸ ಸೇರಿ ನಿಮ್ಮ ಕೂದಲಿನ ಬಣ್ಣ ಬದಲಾಗುತ್ತದೆ. ಮೊಸರು ಕೂದಲನ್ನು ಮೃದುಗೊಳಿಸುತ್ತದೆ.
ಮೆಹಂದಿಯ ಪುಡಿಯನ್ನು ಟೀ ಪುಡಿಯ ಜೊತೆ ಸೇರಿಸಿ ರಾತ್ರಿ ಪೂರ್ತಿ ಇಡಿ. ಬೆಳಿಗ್ಗೆ ಅದರ ಬಣ್ಣ ಬದಲಾಗಿರುತ್ತದೆ. ಮೊದಲು ತಲೆಗೆ ಎಣ್ಣೆ ಹಚ್ಚಿಕೊಂಡು ನಂತರ ಈ ಮಿಶ್ರಣವನ್ನು ಹಚ್ಚಿ. ಅದು ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.