ಭಾರತದಲ್ಲಿ ಏಪ್ರಿಲ್ 14ರಿಂದ ಮದುವೆಯ ಸೀಸನ್ ಶುರುವಾಗ್ತಿದೆ. ಈ ಋತುವಿನಲ್ಲಿ ಸುಮಾರು 40 ಲಕ್ಷ ಮದುವೆಗಳು ನಡೆಯುವ ಸಾಧ್ಯತೆ ಇದೆ. ಇದರಿಂದ ವರ್ತಕರು 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಲಿದ್ದಾರೆ. ವ್ಯಾಪಾರಿಗಳ ಸಂಸ್ಥೆ CAT ಅಂದಾಜಿನ ಪ್ರಕಾರ ದೆಹಲಿಯ ಎನ್‌ಸಿಆರ್ ಒಂದರಲ್ಲೇ 3 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದೆ. ಇಲ್ಲಿ 1 ಲಕ್ಷ ಕೋಟಿ ವಹಿವಾಟು ನಡೆಯಬಹುದು.
ದೇಶದಲ್ಲಿ ಕೊರೊನಾ ಸೋಂಕು ತಗ್ಗಿದ ಬಳಿಕ ಇದು ಮೊದಲ ಮದುವೆ ಸೀಸನ್ ಆಗಿದ್ದು, ಯಾವುದೇ ನಿರ್ಬಂಧಗಳಿಲ್ಲದೇ ಮದುವೆಗಳು ನಡೆಯಲಿವೆ. ಹಾಗಾಗಿ ಕೊರೊನಾ ಸಮಯದಲ್ಲಿ ನಷ್ಟಕ್ಕೀಡಾಗಿದ್ದ ವ್ಯಾಪಾರಸ್ಥರು, ಈ ಬಾರಿಯ ಮದುವೆ ಸೀಸನ್ ನಲ್ಲಾದ್ರೂ ಒಳ್ಳೆಯ ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿತ್ತು. ಈ ಸೀಸನ್ ನಲ್ಲಿ ಜಾಸ್ತಿ ಮುಹೂರ್ತಗಳೂ ಇರಲಿಲ್ಲ. ಹಾಗಾಗಿ ಬಹಳ ಕಡಿಮೆ ಸಂಖ್ಯೆಯಲ್ಲಿ ವಿವಾಹಗಳು ನೆರವೇರಿದ್ದವು.
ಅಂದಾಜಿನ ಪ್ರಕಾರ ಈ ಬಾರಿ ಸುಮಾರು 5 ಲಕ್ಷ ಮದುವೆಗಳಲ್ಲಿ ತಲಾ 2 ಲಕ್ಷ ರೂಪಾಯಿ ವೆಚ್ಚ ಮಾಡುವ ನಿರೀಕ್ಷೆ ಇದೆ. 10 ಲಕ್ಷ ಮದುವೆಗಳಲ್ಲಿ ಪ್ರತಿ ಮದುವೆಗೆ ಸುಮಾರು 5 ಲಕ್ಷ ವೆಚ್ಚವಾಗುತ್ತದೆ. 10 ಲಕ್ಷ ಮದುವೆಗಳಲ್ಲಿ ಒಂದೊಂದು ಮದುವೆಗೂ 10 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. 5 ಲಕ್ಷ ಮದುವೆಗಳಲ್ಲಿ ತಲಾ 15 ಲಕ್ಷ ರೂಪಾಯಿ ವೆಚ್ಚ ಮಾಡುವ ನಿರೀಕ್ಷೆ ಇದೆ.
ಇನ್ನು 5 ಲಕ್ಷ ಮದುವೆಗಳಲ್ಲಿ ತಲಾ 20 ಲಕ್ಷ, 4 ಲಕ್ಷ ಮದುವೆಗಳಲ್ಲಿ ಪ್ರತಿ ಮದುವೆಗೆ 25 ಲಕ್ಷ, 50 ಸಾವಿರ ಮದುವೆಗಳಲ್ಲಿ ತಲಾ 50 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ. 50 ಸಾವಿರ ಮದುವೆಗಳಲ್ಲಿ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಇವನ್ನೆಲ್ಲ ಲೆಕ್ಕ ಹಾಕಿದ್ರೆ ಒಟ್ಟಾರೆ ಈ ಮದುವೆ ಸೀಸನ್ ನಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯಲಿದೆ.
ಮದುವೆಗಾಗಿ ಮನೆಗಳ ರಿಪೇರಿ, ಪೇಂಟಿಂಗ್ ನಡೆಯುತ್ತೆ. ಆಭರಣಗಳು, ಸೀರೆಗಳು, ಲೆಹೆಂಗಾ, ಸಿದ್ಧ ಉಡುಪುಗಳು, ಇತರ ಬಟ್ಟೆಗಳು, ಪಾದರಕ್ಷೆ, ಮದುವೆ ಆಮಂತ್ರಣ ಪತ್ರಿಕೆ, ಡ್ರೈ ಫ್ರೂಟ್ಸ್, ಸಿಹಿತಿಂಡಿಗಳು, ಹಣ್ಣು, ಮದುವೆಯಲ್ಲಿ ಬಳಸುವ ಪೂಜಾ ಸಾಮಗ್ರಿಗಳು, ದಿನಸಿ, ಆಹಾರ ಧಾನ್ಯಗಳು, ಅಲಂಕಾರಿಕ ವಸ್ತುಗಳು, ವಿದ್ಯುತ್ ಉಪಕರಣಗಳು, ಉಡುಗೊರೆ ವಸ್ತುಗಳ ಖರೀದಿ ಜೋರಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ವ್ಯಾಪಾರವಾಗುವ ಸಾಧ್ಯತೆಯಿದೆ.
ಹೋಟೆಲ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳಲ್ಲೂ ದೊಡ್ಡ ಮಟ್ಟದಲ್ಲಿ ವಹಿವಾಟು ನಡೆಯುತ್ತದೆ. ಇದರಲ್ಲಿ ಟೆಂಟ್ ಡೆಕೋರೇಟರ್‌ಗಳು, ಹೂವಿನ ಅಲಂಕಾರ ಮಾಡುವವರಿಗೆ ಕೆಲಸ ಸಿಗುತ್ತದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿರುವವರಿಗೆ ಈ ಮದುವೆಯ ಸೀಸನ್ ಆರ್ಥಿಕ ಚೇತರಿಕೆ ನೀಡಲಿದೆ.