18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಭಾನುವಾರವೇ ಚಾಲನೆ ಸಿಕ್ಕಿದೆ. ಆದ್ರೆ ಮೊದಲ ದಿನ ಬೂಸ್ಟರ್ ಡೋಸ್ ಪಡೆಯಲು ಸಾರ್ವಜನಿರಕರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ.
10 ಸಾವಿರಕ್ಕಿಂತಲೂ ಕಡಿಮೆ ನಾಗರಿಕರು ಕೊರೊನಾ ವ್ಯಾಕ್ಸಿನ್ ನ ಮೂರನೇ ಡೋಸ್ ಪಡೆದುಕೊಂಡಿದ್ದಾರೆ. ಸುಮಾರು 850 ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಹಾಕಲಾಗ್ತಿದೆ.
ನಿನ್ನೆ ದೇಶಾದ್ಯಂತ 9,496 ಮಂದಿ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದು. ಆದ್ರೆ ಕೊರೊನಾ ವ್ಯಾಕ್ಸಿನ್ ನ ಎರಡನೇ ಲಸಿಕೆ ಪಡೆದು 9 ತಿಂಗಳು ಕಳೆದಿರಬೇಕು. ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಇವತ್ತಿನಿಂದ ಬೂಸ್ಟರ್ ಡೋಸ್ ಲಭ್ಯವಿದೆ. ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು ಬೂಸ್ಟರ್ ಡೋಸ್‌ಗಳಿಗೆ ಸೇವಾ ಶುಲ್ಕವಾಗಿ 150 ರೂಪಾಯಿ ಮಾತ್ರ ವಿಧಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ ಗಳು, ಮತ್ತು 60 ವರ್ಷ ಮೇಲ್ಪಟ್ಟ ನಾಗರಿಕರು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಬೂಸ್ಟರ್ ಡೋಸ್ ಪಡೆಯಬಹುದು. ಮೊದಲ ಎರಡು ಲಸಿಕೆಯನ್ನು ಕೋವಿಶೀಲ್ಡ್ ಪಡೆದಿದ್ದರೆ ಮೂರನೇ ಡೋಸ್ ಕೂಡ ಕೋವಿಶೀಲ್ಡ್ ಅನ್ನೇ ಪಡೆಯುವುದು ಕಡ್ಡಾಯ. ಮೊದಲೆರಡು ಬಾರಿ ಕೋವ್ಯಾಕ್ಸಿನ್ ಪಡೆದಿದ್ದರೆ ಬೂಸ್ಟರ್ ಡೋಸ್ ಕೂಡ ಕೋವ್ಯಾಕ್ಸಿನ್ ಆಗಿರಬೇಕು.
ಮೊದಲೆರಡು ಡೋಸ್ ಲಸಿಕೆಯನ್ನು ಯಾವುದು ಪಡೆದಿರುತ್ತೀರೋ ಮೂರನೆ ಲಸಿಕೆ ಕೂಡ ಅದೇ ಆಗಿರುತ್ತದೆ. ಎಲ್ಲಾ ಫಲಾನುಭವಿಗಳು ಈಗಾಗಲೇ COVIN ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಬೂಸ್ಟರ್ ಡೋಸ್‌ಗೆ ಯಾವುದೇ ಹೊಸ ನೋಂದಣಿ ಅಗತ್ಯವಿಲ್ಲ.