ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್ ಖಾನ್ ಈಗ ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ. ಪಾಕ್ ನೂತನ ಪ್ರಧಾನಿಯಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ ಪಕ್ಷದ ಅಧ್ಯಕ್ಷ ಶಹಬಾಜ್ ಶರೀಫ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ವಿದೇಶಾಂಗ ಸಚಿವರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇದರ ಮಧ್ಯೆ ಇಮ್ರಾನ್ ಖಾನ್ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಅವಿಶ್ವಾಸ ಗೊತ್ತುವಳಿ ಮೂಲಕ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಎಂಬ ದಾಖಲೆಗೆ ಇಮ್ರಾನ್ ಖಾನ್ ಪಾತ್ರರಾಗಿದ್ದು, ಇದರ ಜೊತೆಗೆ ಐದು ವರ್ಷಗಳ ಪೂರ್ಣಾವಧಿ ಅಧಿಕಾರವನ್ನು ನಡೆಸದ ಪ್ರಧಾನಿಗಳ ಪಟ್ಟಿಗೆ ಇವರು ಸಹ ಸೇರ್ಪಡೆಗೊಂಡಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಇಮ್ರಾನ್ ಖಾನ್ ಕಡೆ ಕ್ಷಣದವರೆಗೂ ಪ್ರಯತ್ನ ನಡೆಸಿದ್ದು ಯಾವುದೇ ಪ್ರಯೋಜನವಾಗಲಿಲ್ಲ.
ಪಾಕಿಸ್ತಾನದ ನೂತನ ಪ್ರಧಾನಿ ಆಯ್ಕೆಗಾಗಿ ಇಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದು, 342 ಸದಸ್ಯ ಬಲದ ಸದನದಲ್ಲಿ ಪ್ರಧಾನಿ ಪಟ್ಟ ಪಡೆಯಲು 172 ಮತಗಳನ್ನು ಪಡೆಯಬೇಕಿದೆ. ಶಹಬಾಜ್ ಶರೀಫ್ ಅವರಿಗೆ ಪ್ರತಿಪಕ್ಷಗಳು ಸಹ ಬೆಂಬಲಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಧಾನಿ ಪಟ್ಟ ಸಲೀಸಾಗಿ ಒಲಿದು ಬರಲಿದೆ ಎಂದು ಹೇಳಲಾಗಿದೆ.