ಹರಪನಹಳ್ಳಿ: ಎಲ್ಲರಿಗೂ ವ್ಯಾಪಾರ ಮಾಡುವ ಹಕ್ಕಿದೆ ವಿರೋಧಿಸಲು ಆಗುವುದಿಲ್ಲ. ದಾಳಿಕೋರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ ಎಂದು ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಾನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ. ಕರ್ನಾಟಕ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ. ಎಲ್ಲರೂ ಸಾಮರಸ್ಯದಿಂದ ಜೀವಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಮದರು.
ಜನಾರ್ದನ ರೆಡ್ಡಿ ಅವರನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಚಿಂತನೆ ನಡೆಸಿಲ್ಲ. ಇಂದು ಇದೇ ಮೊದಲ ಬಾರಿಗೆ ಜನಾರ್ಧನರೆಡ್ಡಿ ಭೇಟಿಯಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಕರುಣಾಕರರೆಡ್ಡಿ ಗಮನಸೆಳೆದರು. ಜಲಜೀವನ ಮಿಷನ್ ಅಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶ್ರೀರಾಮುಲು ಸೇರಿದಂತೆ ರೆಡ್ಡಿ ಸಹೋದರರು ಒಂದಾಗಿರುವುದು ಸಂತಸ ತಂದಿದೆ. ಶ್ರೀ ರಾಮನವಮಿಯ ದಿನ ಒಂದಾಗಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಸೀತಾರಾಮ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ದ ಅವರು ಜಿಲ್ಲೆಯನ್ನು ಕೆಲವು ಕುಟುಂಬ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಅಂತಹ ಜಿಲ್ಲೆಯಲ್ಲಿ ರೆಡ್ಡಿ ಸಹೋದರರಿಂದ ರಾಜಕೀಯ ಬದಲಾವಣೆಯಾಯಿತು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಅನುದಾನವನ್ನು ನಮ್ಮ ಸರ್ಕಾರ ಸಂಪೂರ್ಣ ಖರ್ಚು ಮಾಡಲಿದೆ. ನಮ್ಮ ಸಾಧನೆ ಜನರ ಮುಂದಿಟ್ಟು 2023ರಲ್ಲಿ ಅಧಿಕಾರ ಹಿಡಿಯುತ್ತೇವೆ. ಕಾಂಗ್ರೆಸ್ ಸರ್ಕಾರದ ಭಾಗ್ಯಗಳು ರಾಜ್ಯದ ಜನರ ಮನೆ ತಲುಪಲಿಲ್ಲ. ಹಾಗಾಗಿ, 2018ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆ ಜನ ಬುದ್ಧಿ ಕಲಿಸಿದರು ಎಂದು ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.