ಬೇಸಿಗೆಯಲ್ಲಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಚರ್ಮದ ಆರೋಗ್ಯ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸಲು ನೀರು ಹಾಗೂ ತಾಜಾ ಹಣ್ಣಿನ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ನಿಂಬೆಹಣ್ಣು, ಬೇಲದ ಹಣ್ಣು, ಮಾವಿನಕಾಯಿಯ ಪಾನಕಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಳ್ಳಬಹುದು.
ಚರ್ಮವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಇರುವ ಸರಳ ಮಾರ್ಗಗಳು
ಅಲೋವೆರಾ ಪ್ಯಾಕ್:
ಅಲೋವೆರಾದ ಒಂದು ಎಲೆಯನ್ನು ಕತ್ತರಿಸಿ ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ತೆಗೆದುಕೊಳ್ಳಬೇಕು.
ತೆಗೆದ ತಿರುಳನ್ನು ಚೆನ್ನಾಗಿ ಕಿವುಚಿ ಮುಖ ಕುತ್ತಿಗೆಗೆ ಲೇಪಿಸಿ ಒಂದು ಗಂಟೆಯ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮದ ತೇವಾಂಶ ಹೆಚ್ಚುತ್ತದೆ. ಇದನ್ನು ಸ್ನಾನಕ್ಕೆ ಮೊದಲು ಕೈ ಮತ್ತು ಕಾಲುಗಳಿಗೂ ಲೇಪಿಸಬಹುದು.
ಟೊಮ್ಯಾಟೋ ಪ್ಯಾಕ್:
ಬಿಸಿಲಿನ ಬೇಗೆಯಿಂದ ಮನೆಗೆ ಹಿಂದಿರುಗಿದಾಗ ಟ್ಯಾನ್ ಆದ ಚರ್ಮವನ್ನು ಟೊಮ್ಯಾಟೊ ಬಳಸಿ ಡಿಟ್ಯಾನ್ ಮಾಡಬಹುದು ಟೊಮ್ಯಾಟೋ ತಿರುಳನ್ನು ಮುಖ ಮತ್ತು ಕೈ ಕಾಲುಗಳಿಗೆ ಲೇಪಿಸಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಮುಲ್ತಾನಿ ಮಟ್ಟಿ:
ಮುಲ್ತಾನಿ ಮಟ್ಟಿ 1ಚಮಚ, ಮೊಸರು ಅರ್ಧ ಚಮಚ, ರೋಸ್ ವಾಟರ್ ಒಂದು ಚಮಚ ಬಳಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.