ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು ಕಂಡಿದ್ದಾರೆ. ಮಂಗಳೂರಿನ ಸುರತ್ಕಲ್ ನ NITK ಬೀಚಿನಲ್ಲಿ ದುರಂತ ಸಂಭವಿಸಿದೆ.
ಮಂಗಳೂರು ಮೂಲದ ತ್ರಿಷಾ(17), ವೈಷ್ಣವಿ(18) ಮೃತಪಟ್ಟವರು ಎಂದು ಹೇಳಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕುಟುಂಬ ಸದಸ್ಯರೊಂದಿಗೆ ಪಿಂಡ ಪ್ರದಾನ ಮಾಡಲು ಬೀಚ್ ಗೆ ಬಂದಿದ್ದ ಸಹೋದರಿಯರು ಸಮುದ್ರದಲೆಗಳ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದಾರೆ. ಮೂವರು ಕೊಚ್ಚಿ ಹೋಗಿದ್ದು, ಸ್ಥಳೀಯ ಈಜುಗಾರರು ಹಾಗೂ ಹೋಂಗಾರ್ಡ್ ಗಳಿಂದ ರಕ್ಷಣೆ ಮಾಡಲಾಗಿದೆ.
ಅವರನ್ನು ಸಮುದ್ರದಿಂದ ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಹೋದರಿಯರು ಸಾವನ್ನಪ್ಪಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.