ಅಸಹಾಯಕ ಮಹಿಳೆಯ ಆತ್ಮವನ್ನೇ ನಾಶಪಡಿಸುವ ಅತ್ಯಾಚಾರ ಕೊಲೆಗಿಂತ ಘೋರವಾಗಿದೆ ಎಂದು ಮುಂಬೈನ ವಿಶೇಷ ಪೋಕ್ಸೊ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
15ರ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 28 ವರ್ಷದ ಯುವಕನನ್ನು ದೋಷಿ ಎಂದು ಘೋಷಿಸಿದ್ದ ಕೋರ್ಟ್, 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2012ರಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿಕೊಂಡು ಈತ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದ. ಎರಡನೇ ಆರೋಪಿ ವಿಚಾರಣೆ ವೇಳೆ ಮೃತಪಟ್ಟಿದ್ದಾನೆ. ವಿಚಾರಣೆ ವೇಳೆ ಸಂತ್ರಸ್ಥೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆಯೇ ಖುದ್ದಾಗಿ ಶಿಕ್ಷೆಗೊಳಗಾದ ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿದಿದ್ದಾಳೆ.
ವಿಶೇಷ ನ್ಯಾಯಾಧೀಶ ಎಚ್.ಸಿ.ಶಿಂಧೆ ಮಾತನಾಡಿ, ಸಂತ್ರಸ್ತೆಯ ಸಾಕ್ಷ್ಯವು ನಂಬಲರ್ಹವಾಗಿದೆ. ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶದಿಂದ ಏಕಾಂತ ಸ್ಥಳಕ್ಕೆ ಕರೆದೊಯ್ದಿರುವುದು ಸಾಬೀತಾಗಿದೆ ಎಂದು ಹೇಳಿದ್ರು. ಸಂತ್ರಸ್ಥೆ ಆರೋಪಿಗಳನ್ನು ಸರಿಯಾಗಿ ಗುರುತಿಸಿದ್ದು, ಘಟನೆಯನ್ನು ಖುದ್ದಾಗಿ ವಿವರಿಸಿದ್ದಾಳೆ. ಹಾಗಾಗಿ ಆರೋಪ ಸಾಬೀತಾಗಿದ್ದು ಯುವಕ ದೋಷಿಯೆಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ರು.
ಅಷ್ಟೇ ಅಲ್ಲ ಇಂತಹ ಅಪರಾಧ ಪ್ರಕರಣಗಳ ಬಗ್ಗೆ ನ್ಯಾಯಾಲಯ ಮೃದು ಧೋರಣೆ ತಳೆಯಲು ಸಾಧ್ಯವಿಲ್ಲ. ಹಾಗೇನಾದ್ರೂ ಮಾಡಿದ್ರೆ ಅದು ನಾಗರಿಕ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಅಂತಾ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.