ನವದೆಹಲಿ: ಶೀಘ್ರದಲ್ಲೇ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಪಡೆಯುವುದರ ಜೊತೆಗೆ ಜನರು ಬ್ಯಾಂಕ್ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ಪಡಿತರ ಅಂಗಡಿಯನ್ನು ‘ಸಾಮಾನ್ಯ ಸೇವಾ ಕೇಂದ್ರ’ ಎಂದು ಗುರುತಿಸಿ, ‘ಬ್ಯಾಂಕ್ ಮಿತ್ರ’ರ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಪರಿಚಯಿಸಲು ರಾಜ್ಯಗಳು ಕ್ರಮತೆಗೆದುಕೊಳ್ಳುವಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪತ್ರ ಕಳುಹಿಸಿದೆ.
ಈ ಕ್ರಮ ಗ್ರಾಮೀಣ ಬ್ಯಾಂಕಿಂಗ್ ರಚನೆಯನ್ನು ಬಲಪಡಿಸುವ ಗುರಿ ಹೊಂದಿದೆ. ಹೊಸ ವ್ಯವಸ್ಥೆಯ ಕಾರ್ಯಚಟುವಟಿಕೆ, ಪಡಿತರ ಅಂಗಡಿಗಳಿಗೆ ಬ್ಯಾಂಕ್ ಗಳು ಹೇಗೆ ಸಹಾಯ ಮಾಡುತ್ತವೆ, ಕೆಲಸಕ್ಕೆ ಎಷ್ಟು ಕಮಿಷನ್ ನೀಡಲಾಗುತ್ತದೆ. ಮುಂತಾದವುಗಳ ಬಗ್ಗೆ ಚರ್ಚಿಸಲು ಭಾರತದಾದ್ಯಂತ ಪಡಿತರ ಅಂಗಡಿ ಸಂಘಟನೆಗಳ ಪ್ರಮುಖ ಮುಖಂಡರನ್ನು ದೆಹಲಿಗೆ ಆಹ್ವಾನಿಸಲಾಗಿದೆ.
ಅವರು ಈಗಾಗಲೇ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾದ ಕನ್ವಾಲ್ಜಿತ್ ಶೋರ್ ಅವರೊಂದಿಗೆ ಸಭೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಅವರು ಮುಂದಿನ ಕೆಲವು ದಿನಗಳಲ್ಲಿ ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.