ಚಿತ್ರದುರ್ಗ: ಎಲ್ಲಾ ನಿಘಂಟುಗಳಿಂದ ಶೂದ್ರ ತೆಗೆಯಬೇಕು. ಶೂದ್ರ ಹೋಗಿ ಶುದ್ಧವಾಗಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಮಾನವ ಬಂಧುತ್ವ ಹೆಸರಿನಲ್ಲಿ ಇಷ್ಟು ಜನ ಸೇರಿರುವುದು ಖುಷಿ ತಂದಿದೆ. ನೀವು ಸಮಾಜಕ್ಕೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ಭೂಮಿಗೆ ಗೊಬ್ಬರ ಕೊಡುವ ಕಾಮಧೇನು ಆಗಬೇಕು. ನಾವು ಶಿಕ್ಷಿತರು ಯುದ್ಧದ ಬಗ್ಗೆ ವಂಶಪಾರಂಪರ್ಯವಾಗಿ ಗೊತ್ತಿದೆ. ಯುದ್ಧದಲ್ಲಿ ನಾವು ಯಾವತ್ತೂ ಸೋಲನ್ನು ಕಂಡಿಲ್ಲ ಎಂದು ಹೇಳಿದ್ದಾರೆ.
ರಂಗಭೂಮಿ ಮೇಲೆ ಕಲಾವಿದ ಸಾಯುತ್ತಾನೆ ಹೊರತು ಸುಳ್ಳು ಹೇಳುವುದಿಲ್ಲ. ನಾನು ಕಂಡ ಮೇರು ನಟ ಕರ್ನಾಟಕ ರತ್ನ ಡಾ. ರಾಜಕುಮಾರ್. ರಾಜಕೀಯಕ್ಕೆ ಬರದೇ ಕನ್ನಡ ನುಡಿನಾಡಿಯಾಗಿದ್ದರು. ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ್ದು ಚಿತ್ರದುರ್ಗದಿಂದ ಎಂದರು.
ಯಾವ ಭಾರತಿಯನು ಏಕಾಂಗಿಯಲ್ಲ, ಎಲ್ಲರೂ ಸಾಲಗಾರರು, ಶಸ್ತ್ರಾಸ್ತ್ರಗಳ ಸಾಲದ ಭಾರ ಪ್ರತಿಯೊಬ್ಬ ಭಾರತೀಯನ ಮೇಲಿದೆ. ನಾಡಿನ ಸಮಸ್ಯೆ ಪರಿಹರಿಸಿ ಉಪಾಯ ಕಂಡು ಹಿಡಿಯಲು ಅವಕಾಶ ಇದೆ. ನೀವು ಎಚ್ಚರವಾಗಿರಬೇಕು, ನಮ್ಮನ್ನ ಕೆಣಕಿ ಬಲಿ ಹಾಕಲು ಯತ್ನಿಸುತ್ತಾರೆ. ಸೋಲದ ಯೋಧರಿಗೆ ವಿಷಭರಿತ ಸೇಬು ಹಂಚಲಾಗುತ್ತಿದೆ. ನೀವು ಬುದ್ಧನಾಗಬೇಡಿ, ಶುದ್ಧರಾಗಿ ಸಾಕು. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಸಂಸ್ಥಾನಗಳು ಯುದ್ಧದಲ್ಲಿ ತೊಡಗಿದ್ದವು. ಸಂವಿಧಾನ ಜಾರಿಯಾದ ಮೇಲೆ ಸಂಸ್ಥಾನಗಳ ಯುದ್ಧ ನಿಂತಿತು. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ ಮೇಲೆ ಇರಬೇಕು. ಶುದ್ಧತೆ ಹೊಂದಿದವರನ್ನು ಅಧಿಕಾರಕ್ಕೆ ತನ್ನಿ. ಶೂದ್ರ ಹೋಗಿ ಶುದ್ಧವಾಗಬೇಕು ಎಂಬುದರ ಬಗ್ಗೆ ಹಾಡು ಬರೆಯುವೆ. ಅಂಬೇಡ್ಕರ್ ಜಯಂತಿ ವೇಳೆ ಹಾಡು ಬರೆದು ಹಾಕುತ್ತೇನೆ ಎಂದು ಚಿತ್ರದುರ್ಗದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.