ಗೃಹ ಮಂತ್ರಿ ಅಮಿತ್ ಶಾ ಭಾಷೆಗಳ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಒಂದು ಭಾಷೆ ಒಂದು ದೇಶ ಎಂಬ ಹೇಳಿಕೆ ನೀಡಿದ್ದ ಅಮಿತ್ ಶಾ ವಿರುದ್ದ ದೇಶದ ವಿವಿಧ ರಾಜ್ಯಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೆ ಇಂಗ್ಲೀಷ್ ಗೆ ಪರ್ಯಾಯವಾಗಿ ಹಿಂದಿ ಬಳಸಬೇಕು. ಸ್ಥಳೀಯ ಭಾಷೆಗಳನ್ನಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜ್ಯದಲ್ಲೂ ಅಮಿತ್ ಶಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಸರಣಿ ಟ್ವೀಟ್ ಮೂಲಕ ಭಾಷೆ ಕುರಿತ ಅಮಿತ್ ಶಾ ಅವರ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ..? ಪ್ರಾದೇಶಿಕ ಭಾಷೆಗಳ ಮೇಲೆ ಅವರಿಗ್ಯಾಕೆ ಈ ಪರಿ ದ್ವೇಷ ಎಂದೂ ಸಹ ಹೆಚ್.ಡಿ.ಕೆ ಪ್ರಶ್ನಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಕೇಂದ್ರ ಗೃಹ ಸಚಿವರು ಹುಳಿ ಹಿಂಡಿ, ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡುತ್ತಿರುವುದು ಆಘಾತಕಾರಿ. ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರು ಪ್ರತಿ ಸಂಸ್ಥಾನವನ್ನು ಆಕ್ರಮಿಸಿಕೊಳ್ಳುವ ಮುನ್ನ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಈಗ ಬಿಜೆಪಿ ಅದೇ ನೀತಿ ಮುಂದುವರೆಸಿದ್ದು, ಬ್ರಿಟೀಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ. ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ ? ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೇ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.