ಕೊರೊನಾದಿಂದಾಗಿ ನಲುಗಿರುವ ಕ್ಷೇತ್ರಗಳ ಪೈಕಿ ಪ್ರವಾಸೋದ್ಯಮವೂ ಒಂದು. ಇದೀಗ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಚಟುವಟಿಕೆಗಳು ಆರಂಭವಾಗಿರುವ ಮಧ್ಯೆ ಪ್ರವಾಸೋದ್ಯಮವೂ ಸಹ ಚೇತರಿಕೆ ಕಾಣುತ್ತಿದೆ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ವಿಜಯಪುರ ಜಿಲ್ಲಾಧಿಕಾರಿ ಮಹತ್ತರ ಕಾರ್ಯವೊಂದನ್ನು ಮಾಡಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳೊಂದಿಗೆ ಜಟಕಾ ಬಂಡಿ ಏರಿ ವಿಶ್ವ ವಿಖ್ಯಾತ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಹಾಗೂ ಪ್ರವಾಸಿಗರಿಲ್ಲದೆ ಆರ್ಥಿಕ ಸಂಕಷ್ಟದಿಂದ ನಲುಗಿರುವ ಟಾಂಗಾವಾಲಾರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಕಾರ್ಯ ಮಾಡಿದ್ದಾಗಿ ಹೇಳಿದ್ದಾರೆ.
ಅಲ್ಲದೇ ತಾವು ಇದೇ ಮೊದಲ ಬಾರಿಗೆ ಜಟಕಾ ಬಂಡಿ ಏರಿದ್ದಾಗಿ ತಿಳಿಸಿದ ಜಿಲ್ಲಾಧಿಕಾರಿಯವರು, ಇದು ತಮಗೆ ಖುಷಿ ನೀಡಿದೆ ಎಂದಿದ್ದಾರೆ. ಪ್ರವಾಸಿಗರೂ ಸಹ ಈ ಐತಿಹಾಸಿಕ ಸ್ಥಳದಲ್ಲಿ ಜಟಕಾ ಬಂಡಿ ಪ್ರಯಾಣ ಮಾಡುವ ಮೂಲಕ ಹೊಸ ಅನುಭವ ಪಡೆಯುವುದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಟಾಂಗಾವಾಲರಿಗೆ ನೆರವಾಗಬೇಕಿದೆ ಎಂದು ಹೇಳಿದ್ದಾರೆ.