ಶ್ರೀನಗರ: ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಏಪ್ರಿಲ್ 9 ರಂದು ನಡೆದ ಎರಡು ಎನ್ ಕೌಂಟರ್ ಗಳಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಕಮಾಂಡರ್ ಕೊಲ್ಲಲ್ಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಿರ್ಹಾಮಾ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಎಲ್ಇಟಿ ಕಮಾಂಡರ್ ನಿಸಾರ್ ದಾರ್ ಕೊಲ್ಲಲ್ಪಟ್ಟಿದ್ದಾನೆ. ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯ ಮುಂದುವರಿದಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.
ಕುಲ್ಗಾಮ್ ನ ಡಿಹೆಚ್ ಪೋರಾದಲ್ಲಿ ಎರಡನೇ ಎನ್ ಕೌಂಟರ್ ನಡೆಯುತ್ತಿದ್ದು, ಹಿಜ್ಬುಲ್ ಗೆ ಸೇರಿದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಮತ್ತು ಭದ್ರತಾ ಪಡೆಗಳು ಹೇಳಿವೆ.
ಘಟನೆಯಲ್ಲಿ ಇಬ್ಬರು ಯೋಧರೂ ಗಾಯಗೊಂಡಿದ್ದಾರೆ. ಕುಲ್ಗಾಮ್ ನ ಚಾಕಿ ಸಮದ್ ಪ್ರದೇಶದಲ್ಲೂ ಎನ್ ಕೌಂಟರ್ ಗಳು ಆರಂಭವಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.