ಕಿಡ್ನ್ಯಾಪರ್ ಒಬ್ಬ ಚಿಕ್ಕ ಬಾಲಕಿಯನ್ನು ಅಪಹರಿಸಲು ಯೋಜಿಸಿದ್ದನು ಆದರೆ, ಅದೃಷ್ಟವಶಾತ್ ಆಕೆಯ ಕಿಡ್ನಾಪ್ ಆಗದಂತೆ ಹೇಗೆ ರಕ್ಷಿಸಲಾಯಿತು ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮಹಿಳೆಯು ಬಾಲಕಿಗೆ ದೇವತೆಯಂತೆ ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ವ್ಯಕ್ತಿಯೊಬ್ಬರಿಂದ ಅಪಹರಣಕ್ಕೆ ಒಳಗಾಗದಂತೆ ಆಕೆಯನ್ನು ರಕ್ಷಿಸಿದ್ದಾರೆ.
ನೀಲಿ ಬಣ್ಣದ ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುವ ಬಾಲಕಿಯೊಬ್ಬಳು ಅಂಗಡಿಯತ್ತ ಧಾವಿಸುತ್ತಾಳೆ. ಆಕೆಗೆ ಸುಮಾರು 10 ವರ್ಷ ವಯಸ್ಸಾಗಿರಬಹುದು. ಆಕೆ ಮಹಿಳೆಯೊಂದಿಗೆ ಐಸ್ ಕ್ರೀಮ್ ಖರೀದಿಸಿ ಅವರೊಂದಿಗೆ ಮಾತು ಮುಂದುವರೆಸಿದ್ದಾಳೆ.
ಬಳಿಕ ಬಾಲಕಿ ವಿದಾಯ ಹೇಳಿ ಅಂಗಡಿಯಿಂದ ಹೊರಡುತ್ತಿದ್ದಂತೆ, ಕಾರಿನ ಬಳಿ ಅನುಮಾನಾಸ್ಪದ ವ್ಯಕ್ತಿ ನಿಂತಿರುವುದನ್ನು ಮಹಿಳೆ ಗಮನಿಸಿದ್ದಾಳೆ. ಬಾಲಕಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಾರ್ಗದ ಬಳಿ ಕಾರನ್ನು ನಿಲ್ಲಿಸಲಾಗಿದ್ದು, ಕಾರಿನ ಹಿಂದಿನ ಬಾಗಿಲು ತೆರೆದಿದೆ. ಏತನ್ಮಧ್ಯೆ, ಆ ವ್ಯಕ್ತಿ ಫೋನ್‌ನಲ್ಲಿ ಮಾತನಾಡುವಂತೆ ನಟಿಸುತ್ತಿದ್ದಾನೆ. ಆದರೆ, ವಾಸ್ತವವಾಗಿ ಅವನು ಬಾಲಕಿಯ ಮೇಲೆ ಕಣ್ಣಿಟ್ಟಿದ್ದಾನೆ.
ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಯನ್ನು ಮಹಿಳೆ ಗಮನಿಸಿದ್ದಾಳೆ. ಅವನು ಬಾಲಕಿಯತ್ತ ಹೋಗುವುದನ್ನು ನೋಡುತ್ತಾಳೆ. ಆದರೆ, ಮಹಿಳೆಯ ಜಾಗರೂಕತೆ ಮತ್ತು ತ್ವರಿತ ಚಿಂತನೆಯಿಂದ ಬಾಲಕಿಯನ್ನು ರಕ್ಷಿಸಲಾಗುತ್ತದೆ. ಮಹಿಳೆ ಧಾವಿಸಿ ಬರುತ್ತಿದ್ದಂತೆ ಹೆದರಿದ ಕಿಡ್ನಾಪರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಈ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆಯೇ ಅಥವಾ ಕ್ಯಾಮರಾದಲ್ಲಿ ಸೆರೆಹಿಡಿಯಲಾದ ನಿಜವಾದ ದೃಶ್ಯವೇ ಎಂದು ಖಚಿತವಿಲ್ಲ. ಆದರೆ, ಬಾಲಕಿಯನ್ನು ರಕ್ಷಿಸಲು ಮಹಿಳೆ ಧಾವಿಸಿದ ಕ್ಷಣವು ಬೆಚ್ಚಿ ಬೀಳಿಸುತ್ತದೆ.