ಸೂಟ್ ಬೂಟ್ ಅನ್ನು ಬ್ಯುಸಿನೆಸ್ ಸಭೆಗಳು, ಮದುವೆ ಕಾರ್ಯಕ್ರಮಗಳಲ್ಲಿ ಮಾತ್ರ ಧರಿಸಬೇಕೆಂಬ ರೂಲ್ಸ್ ಏನಾದ್ರೂ ಇದೆಯಾ..? ಎಲ್ಲಿ, ಯಾವಾಗ, ಯಾರು ಬೇಕಾದ್ರೂ ಈ ಉಡುಪನ್ನು ತೊಡಬಹುದು.
ಇದೀಗ, ಇಬ್ಬರು ಪಂಜಾಬ್ ಯುವಕರು ಸ್ಟ್ರೀಟ್ ಫುಡ್ ಅನ್ನು ಮಾರಾಟ ಮಾಡುವಾಗ ಸೂಟ್ ಬೂಟ್ ತೊಟ್ಟ ವಿಡಿಯೋ, ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇಬ್ಬರು ಸಹೋದರರು ಮೊಹಾಲಿಯಲ್ಲಿ ರಸ್ತೆಬದಿಯಲ್ಲಿ ಫಾಸ್ಟ್ ಫುಡ್ ತಯಾರಿಸಿ ಮಾರಾಟ ಮಾಡುತ್ತಾರೆ. ಚಾಟ್, ಪಾಪ್ರಿ ಚಾಟ್, ಗೋಲ್ಗಪ್ಪ ಮತ್ತು ದಹಿ ಭಲ್ಲಾ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ. ವಿಶೇಷತೆಯೆಂದರೆ ಇಬ್ಬರೂ ಸೂಟ್ ಧರಿಸಿ ತಮ್ಮ ವ್ಯಾಪಾರವನ್ನು ನಿರ್ವಹಿಸುತ್ತಾರೆ.
ಇತ್ತೀಚೆಗೆ, ಯೂಟ್ಯೂಬರ್ ಹ್ಯಾರಿ ಉಪ್ಪಲ್, ಅವರ ಅಂಗಡಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮಾಡಿರುವಂತಹ ವಿಡಿಯೋ ವೈರಲ್ ಆಗಿದೆ. ಅವರಲ್ಲಿ ಏಕೆ ಸೂಟ್ ಧರಿಸುತ್ತಾರೆ ಎಂದು ಕೇಳಿದಾಗ, ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಹೊಂದಿದ್ದೇವೆ. ಹೀಗಾಗಿ ಜನರು ಅದನ್ನು ತಿಳಿದುಕೊಳ್ಳಬೇಕೆಂದು ಬಯಸುವುದಕ್ಕಾಗಿ ಈ ಉಡುಪು ತೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಈ ಯುವ ಬಾಣಸಿಗರು ಮಿಲಿಯನೇರ್ ಆಗುವ ಹಾದಿಯಲ್ಲಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.