ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ಪರ್ಯಾಯ ರಾಜಕಾರಣ ಮಾಡುತ್ತೇವೆ. ಏ.21ರಂದು ನಡೆಯಲಿರುವ ರೈತ ಸಮಾವೇಶದಲ್ಲಿ ಘೋಷಿಸುವುದಾಗಿ ಹೇಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಲ್ಲಿ ತತ್ವ ಸಿದ್ಧಾಂತಗಳಿಲ್ಲದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಪಕ್ಷಗಳಿವೆ. ಇದೇ ತಿಂಗಳು 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು.
ನಾವು ಯಾರ ಜತೆಯೂ ಕೈಜೋಡಿಸಬೇಕೆಂದಿಲ್ಲ. ಏ.11ರಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ. ಬೇರೆಯವರಂತೆ ಇಪ್ಪತ್ತು, ಮೂವತ್ತು ಕೋಟಿ ಹೆಂಡ ಇಟ್ಕೊಂಡು ಚುನಾವಣೆ ಮಾಡುವುದಾದರೆ ನಾವು ಕಳ್ಳರೆ ಆಗಬೇಕಾಗುತ್ತದೆ. ಬೊಮ್ಮಾಯಿ ಅವರ 40 ಪರ್ಸೆಂಟ್ ಸರ್ಕಾರಕ್ಕೆ ನಾವ್ಹೇಗೆ ಪರ್ಯಾಯ ಆಗುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.