ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯ ಉದ್ಯೋಗಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಈ ತಿಂಗಳು ರೈಲ್ವೇ ಕಾರ್ಮಿಕರ ಸಂಬಳ ಹೆಚ್ಚಾಗಲಿದೆ. ಇದಕ್ಕಾಗಿ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ, ರೈಲ್ವೆ ಸಚಿವಾಲಯವು ತನ್ನ ಎಲ್ಲಾ ವಲಯಗಳಿಗೆ ಈ ಭತ್ಯೆ ಪಾವತಿಸಲು ಸೂಚನೆ ನೀಡಿದೆ.
ಸಚಿವಾಲಯದಿಂದ ಹೊರಡಿಸಿದ ಆದೇಶದ ಪ್ರಕಾರ, ಪರಿಷ್ಕೃತ ದರಗಳೊಂದಿಗೆ ತುಟ್ಟಿ ಭತ್ಯೆ ನೀಡಲಾಗುತ್ತದೆ. ರೈಲ್ವೇಯ ಈ ನಿರ್ಧಾರದಿಂದ ಸುಮಾರು 14 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ನೇರ ಲಾಭವಾಗಲಿದೆ. ಈ ತಿಂಗಳಾಂತ್ಯದೊಳಗೆ ಪಾವತಿಸಲಾಗುವುದು ಎಂದು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ರೈಲ್ವೆ ಮಂಡಳಿಯ ಉಪನಿರ್ದೇಶಕ(ವೇತನ ಆಯೋಗ-VII ಮತ್ತು HAMS) ಜೈಕುಮಾರ್ ಈ ಸಂಬಂಧ ಎಲ್ಲಾ ವಲಯಗಳು ಮತ್ತು ಉತ್ಪಾದನಾ ಘಟಕಗಳಿಗೆ ಪತ್ರ ಬರೆದಿದ್ದಾರೆ. ರೈಲ್ವೆ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು ಜನವರಿ 1, 2022 ರಿಂದ ಜಾರಿಗೆ ಬರುವಂತೆ ಮೂಲ ವೇತನದ 31% ರ ಪ್ರಸ್ತುತ ದರದಿಂದ 34% ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಅಖಿಲ ಭಾರತ ರೈಲ್ವೇ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ, ಪಾವತಿ ತುಟ್ಟಿಭತ್ಯೆ 34% ಹೆಚ್ಚಾಗಿದೆ. ದರ ಜನವರಿ 1, 2022 ರಿಂದ ಅನ್ವಯವಾಗುತ್ತದೆ. ಏಪ್ರಿಲ್ 30 ರಂದು ವೇತನ ಜೊತೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.