ಜಗತ್ತಿನಲ್ಲಿ ನಡೆಯುವ ಅನೇಕ ವಿಚಿತ್ರ ಸಂಗತಿಗಳ ಬಗ್ಗೆ ಕೇಳ್ತಾನೇ ಇರ್ತೀವಿ. ಇಲ್ಲೊಬ್ಳು ಬಾಲಕಿಯ ವರ್ತನೆ ಅದಕ್ಕಿಂತಲೂ ವಿಭಿನ್ನವಾಗಿದೆ. ಅದನ್ನ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.
ಸುಮಾರು 150 ವರ್ಷಗಳ ಹಿಂದೆ ಬ್ರಿಟನ್ನಲ್ಲಿ ಈಕೆ ಜನಿಸಿದ್ದಳು. ತನ್ನ ನಿದ್ರೆಯಿಂದಲೇ ಪ್ರಪಂಚದಾದ್ಯಂತದ ಸುದ್ದಿ ಮಾಡಿದ್ದಳು. ಅಚ್ಚರಿ ಅಂದ್ರೆ ಈಕೆ ಒಂದು ರಾತ್ರಿ ಮಲಗಿದವಳು ಸತತ 9 ವರ್ಷಗಳವರೆಗೆ ನಿದ್ದೆಯಿಂದ ಏಳಲೇ ಇಲ್ಲ.
1859ರ ಮೇ 15ರಂದು ಇಂಗ್ಲೆಂಡ್ ನಲ್ಲಿ ಎಲೆನ್ ಸ್ಯಾಡ್ಲರ್ ಜನಿಸಿದ್ದಳು. ಇವಳಿಗೆ ಒಟ್ಟು 12 ಒಡಹುಟ್ಟಿದವರಿದ್ದರು. ಎಲೆನ್ ತಂದೆ ತೀರಿಕೊಂಡ ಬಳಿಕ ತಾಯಿ ಎರಡನೇ ಮದುವೆಯಾಗಿದ್ಲು. ಎಲೆನ್ ಕುಟುಂಬ ಟರ್ವಿಲ್ಲೆ ಎಂಬ ಹಳ್ಳಿಯಲ್ಲಿ ವಾಸಿಸುತ್ತಿತ್ತು. ಈ ಗ್ರಾಮವು ಆಕ್ಸ್ಫರ್ಡ್ ಮತ್ತು ಬಕಿಂಗ್ಹ್ಯಾಮ್ಶೈರ್ ನಡುವೆ ಇದೆ. 12 ವರ್ಷದವಳಿದ್ದಾಗ ಎಲೆನ್ ಒಂದು ರಾತ್ರಿ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾಳೆ.
1871ರ ಮಾರ್ಚ್ 29ರಂದು ಎಲೆನ್ ತನ್ನ ಸೋದರ ಸೋದರಿಯರ ಜೊತೆ ಮಲಗಲು ತೆರಳಿದ್ದಾಳೆ. ಮರುದಿನ ಬೆಳಗ್ಗೆ ಅವರೆಲ್ಲ ಎದ್ದರೂ ಎಲೆನ್ ಮಾತ್ರ ನಿದ್ದೆಯಿಂದ ಏಳಲೇ ಇಲ್ಲ. ಮನೆಯವರು ಗದ್ದಲ ಎಬ್ಬಿಸಿ ನೀರು ಸುರಿದರೂ ಆಕೆಗೆ ಎಚ್ಚರವಾಗಲಿಲ್ಲ. ಆಕೆ ಮೃತಪಟ್ಟಿದ್ದಾಳೆ ಎಂದೇ ಮನೆಯವರೆಲ್ಲ ಭಾವಿಸಿದ್ದರು. ಆದ್ರೆ ಆಕೆಯಲ್ಲಿ ಹೃದಯ ಬಡಿತವಿತ್ತು. ಕೂಡಲೇ ಅವಳನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ.
ಬಾಲಕಿ ಹೈಬರ್ನೇಶನ್ ಸ್ಥಿತಿಗೆ ತಲುಪಿರುವುದನ್ನು ವೈದ್ಯರು ಗಮನಿಸಿದ್ದಾರೆ. ಸಾಕಷ್ಟು ಪ್ರಯತ್ನ ಮಾಡಿದರೂ ವೈದ್ಯರಿಂದ ಅವಳನ್ನು ಎಬ್ಬಿಸಲು ಸಾಧ್ಯವಾಗಲಿಲ್ಲ. ಎಲೆನ್ ಗೆ ಯಾವ ಕಾಯಿಲೆ ಇರಬಹುದು ಅನ್ನೋದು ಕೂಡ ವೈದ್ಯರಿಗೆ ಗೊತ್ತಾಗಲಿಲ್ಲ. ಎಲೆನ್ ಬಗ್ಗೆ ಬ್ರಿಟನ್ ನಾದ್ಯಂತ ಚರ್ಚೆ ಶುರುವಾಗಿತ್ತು. ಆಕೆಯನ್ನು ಸಾಕಿಕೊಳ್ಳಲು ಬಹಳಷ್ಟು ಜನ ಮುಂದೆ ಬಂದಿದ್ದಾರೆ.
ಹಣವನ್ನೂ ಕೊಟ್ಟಿದ್ದರಿಂದ ಎಲೆನ್ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಆಕೆಯನ್ನು ಜೀವಂತವಾಗಿಡಲು ತಾಯಿ ಗಂಜಿ, ಹಾಲನ್ನು ಕುಡಿಸುತ್ತಿದ್ಲು. ಈ ಮಧ್ಯೆ ಎಲೆನ್ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. 9 ವರ್ಷಗಳ ಬಳಿಕ ಪವಾಡವೇ ನಡೆಯಿತು. ತಾಯಿ ಸತ್ತು 5 ತಿಂಗಳ ನಂತರ ಎಲೆನ್ ಗೆ ನಿದ್ದೆಯಿಂದ ಎಚ್ಚರವಾಗಿದೆ. 12 ವರ್ಷದವಳಿದ್ದಾಗ ನಿದ್ದೆ ಮಾಡಿದ್ದ ಎಲೆನ್ 21 ವರ್ಷವಾದ ಮೇಲೆ ಎದ್ದಿದ್ದಾಳೆ.