ಬಿಸಿಸಿಐ ಅಧ್ಯಕ್ಷರಾಗಿರೋ ಸೌರವ್ ಗಂಗೂಲಿ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಅವಕಾಶ ಬಂದರೂ ಬರಬಹುದು. ಐಸಿಸಿಯ ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ತಮ್ಮ ಅವಧಿಯನ್ನು ವಿಸ್ತರಿಸಲು ಬಯಸ್ತಾ ಇಲ್ಲ. 2020ರಲ್ಲಿ ಗ್ರೆಗ್ ಅಧ್ಯಕ್ಷ ಹುದ್ದೆಗೇರಿದ್ದರು. ಎರಡು ವರ್ಷಕ್ಕೆ ಅವರ ಅಧಿಕಾರವಧಿ ಮುಗಿದಿದೆ. ಹಾಗಾಗಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಸೌರವ್ ಗಂಗೂಲಿ ಮತ್ತು ಜಯ್ ಶಾ ಇಬ್ಬರೂ ಐಸಿಸಿ ಅಧ್ಯಕ್ಷರಾಗಲು ಬಯಸಿದ್ದಾರೆ ಅನ್ನೋ ಸುದ್ದಿ ಕ್ರೀಡಾಲೋಕದಲ್ಲಿ ಹರಿದಾಡ್ತಾ ಇದೆ. ಹಾಗಾಗಿ ಐಸಿಸಿ ಚುನಾವಣೆಯಲ್ಲಿ ದಾದಾಗೆ ಜಯ್ ಶಾ ಮುಖಾಮುಖಿಯಾಗಬಹುದು. ಇಬ್ಬರಲ್ಲಿ ಯಾರೇ ಅಧ್ಯಕ್ಷರಾದರೂ ಆ ಹುದ್ದೆ ಅಲಂಕರಿಸಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಇದುವರೆಗೆ ನಾಲ್ವರು ಭಾರತೀಯರು ಐಸಿಸಿ ಅಧ್ಯಕ್ಷರಾಗಿದ್ದಾರೆ.
ಜಗಮೋಹನ್ ದಾಲ್ಮಿಯಾ ಈ ಸ್ಥಾನಕ್ಕೆ ಬಂದ ಮೊದಲ ಭಾರತೀಯ. ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಈ ಹುದ್ದೆಗೇರಿದ್ದರು. ನವೆಂಬರ್ ನಲ್ಲಿ ಐಸಿಸಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 2023ರ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಹಾಗಾಗಿ ವಿಶ್ವಕಪ್ ಗೂ ಮುನ್ನ ಐಸಿಸಿಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಾಗಬೇಕೆಂದು ಬಿಸಿಸಿಐ ಬಯಸಿದೆ.
ಈ ಜವಾಬ್ಧಾರಿಯನ್ನು ಗಂಗೂಲಿ ಸಮರ್ಥವಾಗಿ ನಿಭಾಯಿಸುವ ವಿಶ್ವಾಸದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಸೌರವ್ ಗಂಗೂಲಿ, ಅದ್ಭುತ ಬ್ಯಾಟ್ಸ್ ಮನ್ ಕೂಡ. ಕ್ರಿಕೆಟ್ ಗೆ ಸಾಕಷ್ಟು ಕೊಡುಗೆ ನೀಡಿರೋ ದಾದಾ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಗಂಗೂಲಿಗೆ ಪೈಪೋಟಿ ಒಡ್ಡಲು ಸಜ್ಜಾಗಿರುವ ಜಯ್ ಶಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ. ಪ್ರಸ್ತುತ ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.