- ಇಂಫಾಲ್: ಶಿಕ್ಷಕರು ತಮ್ಮ ಕಂದನನ್ನು ಶಾಲೆ/ಕಾಲೇಜಿಗೆ ತಮ್ಮ ಜೊತೆ ಕರೆದೊಯ್ದು ಪಾಠ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಬಹುಶಃ ನೀವು ನೋಡಿರುತ್ತೀರಾ. ಆದರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ತನ್ನ ಹಾಲುಗಲ್ಲದ ತಂಗಿಯೊಂದಿಗೆ ತರಗತಿಗೆ ಹಾಜರಾಗಿದ್ದಾಳೆ. ಈ ಫೋಟೋ ಇದೀಗ ಭಾರಿ ಸದ್ದು ಮಾಡಿದೆ.
10 ವರ್ಷದ ಬಾಲಕಿಯೊಬ್ಬಳು ತನ್ನ ಪುಟ್ಟ ತಂಗಿಯ ಜೊತೆ ತರಗತಿಗೆ ಹಾಜರಾಗಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಮಣಿಪುರದ ವಿದ್ಯುತ್ ಮತ್ತು ಅರಣ್ಯ ಸಚಿವ ಬಿಸ್ವಜಿತ್ ತೊಂಗಮ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ವೈರಲ್ ಆಗಿರುವ ಚಿತ್ರದಲ್ಲಿ, ಮಣಿಪುರದ ತಮೆಂಗ್‌ಲಾಂಗ್‌ನ ಮೈನಿಂಗ್‌ಸಿನ್ಲಿಯು ಪಮೇ ಎಂಬ 10 ವರ್ಷದ ಬಾಲಕಿ ತನ್ನ ಸಹೋದರಿಯನ್ನು ಕರೆದುಕೊಂಡು ಶಾಲೆಗೆ ಹೋಗುತ್ತಿದ್ದಾಳೆ. ಈಕೆಯ ಫೋಷಕರು ಕೃಷಿ ಕೆಲಸ ಮಾಡುತ್ತಿರುವುದರಿಂದ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾಲಕಿ ಮೈನಿಂಗ್ಸಿನ್ಲಿಯು ಪುಟ್ಟ ಕಂದಮ್ಮ ತನ್ನ ತಂಗಿಯೊಂದಿಗೆ ತರಗತಿಗೆ ಹಾಜರಾಗಿದ್ದಳು. ತರಗತಿಯಲ್ಲಿ ಮೈನಿಂಗ್ಸಿನ್ಲಿ ಪುಸ್ತಕ ಹಿಡಿದುಕೊಂಡು ಪಾಠ ಕೇಳುತ್ತಾ ಕುಳಿತಿದ್ದರೆ, ಮಗು ಆಕೆಯ ಮಡಿಲಿನಲ್ಲಿ ನಿಶ್ಚಿಂತೆಯಿಂದ ಮಲಗಿತ್ತು.
ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಬಿಸ್ವಜಿತ್ ತೊಂಗಮ್, ಪುಟ್ಟ ಬಾಲೆ ತೋರಿದ ಸಮರ್ಪಣೆಯಿಂದ ಭಾವುಕರಾಗಿದ್ದಾರೆ. ಆಕೆಯ ಶಿಕ್ಷಣದ ಸಮರ್ಪಣೆ ತನ್ನನ್ನು ಬೆರಗುಗೊಳಿಸಿದೆ ಎಂದು ತಿಳಿಸಿದ್ದಾರೆ. ನೆಟ್ಟಿಗರು ಕೂಡ ಫೋಟೋ ನೋಡಿ ಭಾವುಕರಾಗಿದ್ದಾರೆ.
ಇದೀಗ ಬಿಸ್ವಜಿತ್ ತೊಂಗಮ್ ಅವರು ಬಾಲಕಿ ಮೈನಿಂಗ್ಸಿನ್ಲಿಯ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಾಲಕಿಯನ್ನು ಇಂಫಾಲ್ ನಲ್ಲಿ ಪದವಿಯವರೆಗೂ ಓದಿಸುವುದಾಗಿ ಅವರು ತಿಳಿಸಿದ್ದಾರೆ.