ಐಐಟಿ ಪದವೀಧರ ಉತ್ತರ ಪ್ರದೇಶದ ಗೋರಖ್ನಾಥ್ ದೇವಸ್ಥಾನದ ಹೊರಗೆ ಇಬ್ಬರು ಪೊಲೀಸರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ ಘಟನೆಯು ಭಾನುವಾರ ನಡೆದಿದೆ. ಇದೊಂದು ಭಯೋತ್ಪಾದಕ ಕೃತ್ಯವೆಂದು ಯುಪಿ ಪೊಲೀಸರು ವ್ಯಾಖ್ಯಾನಿಸಿದ್ದಾರೆ.
ಮೊಬೈಲ್ ಫೋನ್ನಲ್ಲಿ ದಾಖಲಾದ ವಿಡಿಯೋಗಳಲ್ಲಿ, ಅಹ್ಮದ್ ಮುರ್ತಾಜ ಅಬ್ಬಾಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನ ಅರ್ಚಕರಾಗಿರುವ ಗೋರಖ್ಪುರದ ಗೋರಖ್ನಾಥ್ ದೇವಾಲಯದ ಎದುರು ಹೈಡ್ರಾಮಾ ಮಾಡಿದ್ದಾನೆ. ಮುರ್ತಾಜಾನನ್ನು ಹಿಡಿಯಲು ಯತ್ನಿಸಿದ ಪೊಲೀಸರು ಹಾಗೂ ಅಂಗಡಿಯವರ ಮೇಲೆ ಆತ ಪದೇ ಪದೇ ದಾಳಿ ನಡೆಸಿದ್ದಾನೆ.
ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಸಣ್ಣ ಗುಂಪು ಮುರ್ತಾಜಾ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಕೊನೆಗೂ ಆತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮುರ್ತಾಜಾ ಐಐಟಿ ಬಾಂಬೆಯಲ್ಲಿ ಪದವಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ಹಾಗೂ ಟಿಕೆಟ್ಗಳು ಪತ್ತೆಯಾಗಿದೆ.