ರಾಂಗ್ ಸೈಡ್ ಡ್ರೈವಿಂಗ್ ನಿಂದ ಉಂಟಾಗುವ ಅವಘಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿರುವ ಮುಂಬೈ ಪೊಲೀಸರು ರಾಂಗ್ ಸೈಡ್ನಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಾಹನವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮುಂಬೈನ ನೂತನ ಪೊಲೀಸ್ ಕಮಿಷನರ್ ಆಗಿ ಸಂಜಯ್ ಪಾಂಡೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಉಂಟಾಗಿದೆ. ಮಾರ್ಚ್ 7ರಂದು ರಾಂಗ್ ಸೈಡ್ ಡ್ರೈವಿಂಗ್ ವಿರುದ್ಧ ವಿಶೇಷ ಅಭಿಯಾನವನ್ನೂ ನಡೆಸಲಾಗಿದೆ.
ಮಾರ್ಚ್ 31ರವರೆಗೆ ಮುಂಬೈ ಪೊಲೀಸರು ರಾಂಗ್ ಸೈಡ್ನಲ್ಲಿ ವಾಹನ ಚಾಲನೆ ಮಾಡಿದ ವಾಹನ ಚಾಲಕರ ವಿರುದ್ಧ 2649 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಪ್ರತಿದಿನ ಸರಾಸರಿ 200 ಎಫ್ಐಆರ್ಗಳು ಇದೇ ವಿಚಾರವಾಗಿ ದಾಖಲಾಗುತ್ತಿದೆ.
ಪ್ರಸ್ತುತ ಈ ರೀತಿಯ ತಪ್ಪುಗಳನ್ನು ಎಸಗಿದವರ ವಿರುದ್ಧ ಭಾರತೀಯ ದಂಡ ಸಂಹಿತೆ 279 ಹಾಗೂ 336 ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
ಆದರೆ ಈ ಎಫ್ಐಆರ್ ಗಳಿಗೆ ಕ್ಯಾರೇ ಎನ್ನದೇ ರಾಂಗ್ ಸೈಡ್ನಲ್ಲಿ ಡ್ರೈವಿಂಗ್ ಮುಂದುವರಿಸುವವರಿಗೆ ಎಚ್ಚರಿಕೆ ಎಂಬಂತೆ ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಟ್ವೀಟ್ ಮಾಡಿದ್ದು, ಇಂತಹ ಅಪರಾಧಗಳು ಕಡಿಮೆಯಾಗದೇ ಇದ್ದರೆ ವಾಹನಗಳನ್ನು ಜಫ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.