ನವದೆಹಲಿ: ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಭಾರತೀಯ ಮಹಿಳೆಯರು ಖಿನ್ನತೆ ಮತ್ತು ಆಹಾರದ ಅಭದ್ರತೆಯನ್ನು ಎದುರಿಸಿದ್ದರು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.
ಹೊಸ ಸಂಶೋಧನೆಯ ಪ್ರಕಾರ, ಲಾಕ್‌ಡೌನ್‌ಗಳು ಭಾರತದ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕದ ಜೊತೆಗೆ ಆಹಾರದ ಅಭದ್ರತೆಯ ಹೆಚ್ಚಿಸಿದೆ ಎಂದು ತಿಳಿಸಿದೆ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಗ್ಲೋಬಲ್ ಪಾಲಿಸಿ ಮತ್ತು ಸ್ಟ್ರಾಟಜಿಯ ಅಧ್ಯಯನವು, ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವ ಮಹಿಳೆಯರನ್ನು ಹೆಚ್ಚು ದುರ್ಬಲಗೊಳಿಸಿದೆ ಎಂಬುದನ್ನು ಕಂಡುಹಿಡಿದಿದೆ.
ಹೆಣ್ಣು ಮಕ್ಕಳನ್ನು ಹೊಂದಿರುವವರು ಮತ್ತು ಸ್ತ್ರೀ ಕೇಂದ್ರಿತ ಕುಟುಂಬಗಳಲ್ಲಿ ವಾಸಿಸುವವರು, ಮಾನಸಿಕ ಆರೋಗ್ಯದಲ್ಲಿ ಇನ್ನೂ ಹೆಚ್ಚಿನ ಕುಸಿತವನ್ನು ಅನುಭವಿಸುತ್ತಾರೆ.
ಉತ್ತರ ಭಾರತದಾದ್ಯಂತ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಮೂಲಕ 1,545 ಮನೆಗಳನ್ನು ಸಮೀಕ್ಷೆ ಮಾಡಿದೆ. ಕೆಲವು ಗ್ರಾಮಗಳು ಮತ್ತು ಜಿಲ್ಲೆಗಳು ವಿಭಿನ್ನ ರೀತಿಯ ನೀತಿಗಳನ್ನು ಹೊಂದಿದ್ದವು. ಲೇಖಕರು ತಮ್ಮ ವಿಶ್ಲೇಷಣೆಯಲ್ಲಿ ಕೋವಿಡ್ ಪ್ರಕರಣಗಳು, ಆಸ್ಪತ್ರೆಗೆ ದಾಖಲು ಮತ್ತು ಕೊರೋನ ವೈರಸ್ ನಿಂದ ಸಾವುಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿದ್ದಾರೆ.
ಸಮೀಕ್ಷೆಯಲ್ಲಿ, ಖಿನ್ನತೆಯಲ್ಲಿ 38 ಪ್ರತಿಶತ ಹೆಚ್ಚಳ, ಆತಂಕದಲ್ಲಿ 44 ಪ್ರತಿಶತ ಹೆಚ್ಚಳ ಮತ್ತು 73 ಪ್ರತಿಶತದಷ್ಟು ಬಳಲಿಕೆ ಉಂಟಾಗಿದೆ ಎಂಬುದು ತಿಳಿದು ಬಂದಿದೆ.
ಮನೆಯ ಹೊರಗೆ ಕೆಲಸ ಮತ್ತು ಸಾಮಾಜಿಕತೆಗೆ ಪ್ರವೇಶವನ್ನು ಹೊಂದಿರದಿರುವುದು ಮಹಿಳೆಯರ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ ಎಂದು ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಗೌರವ್ ಖನ್ನಾ ಹೇಳಿದ್ದಾರೆ.
ಸಮೀಕ್ಷೆಯಲ್ಲಿ, ಸರಿಸುಮಾರು ಶೇ. 25ರಷ್ಟು ಕುಟುಂಬಗಳು ಸಾಮಾನ್ಯ ತಿಂಗಳಿಗೆ ಹೋಲಿಸಿದರೆ ಸೇವಿಸುವ ಊಟದ ಪ್ರಮಾಣವನ್ನು ಕಡಿಮೆಗೊಳಿಸಿವೆ.
ಇನ್ನು ಫೋನ್ ಮೂಲಕ ನೀಡಲಾಗುವ ಸಮಾಲೋಚನೆ ಮತ್ತು ಸಹಾಯವಾಣಿ ಸೇವೆಗಳು, ಸಾಂಕ್ರಾಮಿಕದ ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.