ಮೀರತ್: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಂಬುಲೆನ್ಸ್ ಸೇವೆ ಸಿಗದೆ ತನ್ನ ಪುತ್ರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ನಡೆದಿದ್ದ ಘಟನೆ ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿತ್ತು. ಇದೀಗ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್ ದಾರಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಇಂಧನ ಖಾಲಿಯಾಗಿದೆ. ಬಿಜ್ನೋರ್‌ನಿಂದ ಮೀರತ್ ನಲ್ಲಿರೋ ಆಸ್ಪತ್ರೆಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಗ್ರಾಮದ ಸ್ಥಳೀಯರೊಬ್ಬರು ಅಂಬುಲೆನ್ಸ್ ಅನ್ನು ಹತ್ತಿರದ ಪೆಟ್ರೋಲ್ ಬಂಕ್ ಗೆ ಎಳೆಯಲು ಟ್ರ್ಯಾಕ್ಟರ್‌ಗೆ ಕಟ್ಟಿದ್ದಾರೆ. ರಸ್ತೆಯಲ್ಲಿ ಟ್ರ್ಕಾಕ್ಟರ್ ಅಂಬುಲೆನ್ಸ್ ಅನ್ನು ನಿಧಾನವಾಗಿ ಎಳೆಯುತ್ತಾ ಮುಂದೆ ಸಾಗಿದೆ. ಈ ವಿಷಯ ಬೆಳಕಿಗೆ ಬಂದ ತಕ್ಷಣ ಜಿಲ್ಲಾಡಳಿತದ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದೆ.
ಮೀರತ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಅಖಿಲೇಶ್ ಮೋಹನ್ ಮಾತನಾಡಿ, ಬಿಜ್ನೋರ್‌ನಿಂದ ಮೀರತ್‌ಗೆ ಬರುತ್ತಿದ್ದಾಗ ಇಂಧನ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.