ಕಾಡಿನ ರಾಜ ಎಂದೇ ಕರೆಯಲ್ಪಡುವ ಸಿಂಹವು ಬಹಳ ಶಕ್ತಿಶಾಲಿ ಪ್ರಾಣಿಯಾಗಿದೆ. ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣುಗಿಂತ 50% ಹೆಚ್ಚು ತೂಕವಿರುತ್ತದೆ ಒಂದು ಆನೆಯನ್ನು ಕೊಲ್ಲಲು ಸಾಮಾನ್ಯವಾಗಿ ಏಳು ಹೆಣ್ಣು ಸಿಂಹಗಳು ಒಟ್ಟಿಗೆ ದಾಳಿ ಮಾಡಿದ್ರೆ ಮಾತ್ರ ಸಾಧ್ಯವಾಗುತ್ತದೆ. ಆದರೆ, ಕೇವಲ ಎರಡು ಗಂಡು ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿ ಹೊಂದಿವೆ. ಒಂದು ಗಂಡು ಸಿಂಹ ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು.
ಆದರೆ, ಆನೆಗಳ ಹಿಂಡನ್ನು ಕಂಡ್ರೆ ಮಾತ್ರ ಬೆಕ್ಕಿನ ಮರಿಯಂತೆ ಸಿಂಹಗಳು ಓಡಿ ಹೋಗುತ್ತವೆ. ಆನೆಗಳ ಹಿಂಡಿನೊಂದಿಗಿರುವ ಎಳೆಯ ಹಾಗೂ ದುರ್ಬಲ ಆನೆಯನ್ನು ಬೇಟೆಯಾಡುವುದು ಸಿಂಹಗಳಿಗೆ ಸ್ವಲ್ಪ ಕಷ್ಟ ಸಾಧ್ಯವೇ ಹೌದು.
ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಅಂಥದ್ದೇ. ಕಾಡಿನಲ್ಲಿ ಸಿಂಹಗಳ ಗುಂಪು ಒಂದೆಡೆ ಕೂತು ವಿಶ್ರಾಂತಿ ಪಡೆಯುತ್ತಿದ್ದವು. ಈ ವೇಳೆ ಗಜರಾಜನ ದೊಡ್ಡ ಗುಂಪು ಅದರತ್ತ ಧಾವಿಸಿದೆ. ಇದರಿಂದ ಹೆದರಿದ ಸಿಂಹಗಳು ಒಂದೊಂದಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾವೆ. ನಾಯಿಯನ್ನು ಕಂಡಾಗ ಬೆಕ್ಕು ಓಟಕ್ಕೀಳುವಂತೆ ಸಿಂಹಗಳು ಅಲ್ಲಿಂದ ಎಸ್ಕೇಪ್ ಆಗಿವೆ.
ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನ ಅನಿಮಲ್ಕೋಟರಿ ಎಂಬ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಕೋಣಗಳ ಹಿಂಡಿಗೆ ಹೆದರಿದ ಸಿಂಹವೊಂದು ಮರ ಹತ್ತಿ ಗಟ್ಟಿಯಾಗಿ ಹಿಡಿದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಸಿಂಹವು ಕಾಡಿನ ರಾಜ ಎಂದೇ ಜನಜನಿತವಾಗಿದ್ದರೂ ಕೂಡ ಅವುಗಳು ಕೂಡ ದೊಡ್ಡ ಹಿಂಡಿನಲ್ಲಿರುವ ದೈತ್ಯ ಪ್ರಾಣಿಗಳನ್ನು ಕಂಡ್ರೆ ಭಯಪಡುತ್ತವೆ ಅನ್ನೋದಕ್ಕೆ ಈ ವಿಡಿಯೋಗಳೇ ಸಾಕ್ಷಿ.