ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಜನಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಟಿಪ್ಪು ವಿಚಾರ, ಭಗವದ್ಗೀತೆ, ಹಲಾಲ್ ಹೀಗೆ ಸೂಕ್ಷ್ಮ ವಿಚಾರಗಳ ವಿವಾದ ಸೃಷ್ಟಿಸಿ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಬಾರದೆಂಬುದು ಅವರ ದುರುದ್ದೇಶ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಲೆ ಏರಿಕೆ ಮಾತನಾಡಬಾರದೆಂದು ಧರ್ಮ ರಾಜಕಾರಣ ತಂದಿದ್ದಾರೆ. ಹಿಜಾಬ್, ಮತಾಂತರ, ದೇವಸ್ಥಾನಗಳ ಬಳಿ ಮುಸ್ಲೀಂ ವ್ಯಾಪಾರ ನಿರ್ಬಂಧ, ಗೋಹತ್ಯೆ ನಿಷೇಧ ಇವುಗಳನ್ನೆಲ್ಲ ತಂದು ಬೆಲೆ ಏರಿಕೆ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಡುಗೆ ಅನಿಲ, ರಸಗೊಬ್ಬರ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಇಂತಹ ಸ್ಥಿತಿಯಲ್ಲಿ ಹಲಾಲ್ ವಿವಾದ ಸೃಷ್ಟಿಸುವ ಅಗತ್ಯವೇನು? ಅವರ ಧರ್ಮ, ಅವರ ಸಂಸ್ಕೃತಿ ಅವರು ಆಚರಿಸುತ್ತಾರೆ. ಈಗ ನಾವು ಜಾತ್ರೆಯಲ್ಲಿ ಬಲಿ ಕೊಡುವುದಿಲ್ಲವೇ ಹಾಗೆ ಎಂದು ಹೇಳಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು ಆದರೆ ರೈತರಿಂದ 3,600 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ. ರೈತರ ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮನುಷತ್ವ ಅನ್ನುವುದು ಇದೆಯೇ ? ಗೃಹ ಬಳಕೆ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದೆ. ಪೆಟ್ರೋಲ್ ಡೀಸೆಲ್ ದರ ನೂರು ರೂಪಾಯಿ ಗಡಿ ದಾಟಿ ಹೋಗಿದೆ. ಕೇಳಿದರೆ ತೈಲ ಕಂಪನಿ ನಮ್ಮ ಅಧೀನದಲ್ಲಿ ಬರಲ್ಲ ಎನ್ನುತ್ತಾರೆ. ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆಯಾಗಲ್ಲ. ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.