ಜಾರ್ಖಂಡ್ ನ ಛತ್ರಾ ಜಿಲ್ಲೆಯಲ್ಲಿ ದುಷ್ಟಶಕ್ತಿಗಳಿಂದ ದೂರವಿಡಲು 14 ವರ್ಷದ ಬಾಲಕಿಯನ್ನು ಥಳಿಸಿ, ಅಗರಬತ್ತಿಗಳಿಂದ ಸುಟ್ಟ ಆರೋಪದ ಮೇಲೆ ದೆವ್ವ ಬಿಡಿಸುತ್ತೇನೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹೋಳಿ ಆಡಿದ ನಂತರ ಬಾಲಕಿ ಅಸ್ವಸ್ಥಳಾಗಿದ್ದಳು. ಎಂ.ಡಿ. ವಾಹಿದ್, ಭೂತ ಓಡಿಸುತ್ತೇನೆ. ಇದರಿಂದ ಅವಳು ಗುಣಮುಖಳಾಗುತ್ತಾಳೆ ಎಂದು ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದ. ದೆವ್ವ ಓಡಿಸುವ ನೆಪದಲ್ಲಿ ನಾಲ್ಕು ದಿನಗಳ ಕಾಲ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. ನಂತರ ಅವಳು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವನು ಬಾಲಕಿಯನ್ನು ಹೊಡೆದು, ಸುಡುವ ಧೂಪದ್ರವ್ಯದ ತುಂಡುಗಳಿಂದ ಅವಳ ಮುಖ, ತುಟಿಗಳು ಮತ್ತು ಕೈಗಳನ್ನು ಸುಟ್ಟಿದ್ದಾನೆ. ಬಾಲಕಿಯನ್ನು ಛತ್ರಾದಲ್ಲಿರುವ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(RIMS) ಗೆ ದಾಖಲಿಸಲಾಯಿತು.
ಬಾಲಕಿಯ ಕುಟುಂಬದವರು ಲಾವಾಲಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ವಾಹಿದ್(35) ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಂಜನ್ ತಿಳಿಸಿದ್ದಾರೆ.