ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ. ಪಡಿತರ ಪೂರೈಕೆ ಮಾಡುವ ನ್ಯಾಯಬೆಲೆ ಅಂಗಡಿಗಳು ಇನ್ನುಮುಂದೆ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಅಕ್ಕಿ, ಗೋಧಿ ಸಿಗುತ್ತಿದ್ದ ರೇಷನ್ ಅಂಗಡಿಯಲ್ಲಿ ಎಲ್ಪಿಜಿ ಸಿಲಿಂಡರ್, ಪಿಂಚಣಿ ಸೌಲಭ್ಯ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ನ್ಯಾಯಬೆಲೆ ಅಂಗಡಿಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಮಾರ್ಪಡಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ದೊರಕಿಸಿಕೊಡಲು ಸರ್ಕಾರ ಕ್ರಮ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಇನ್ನೊಂದು ತಿಂಗಳಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.
ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದಿಲ್ಲ. ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಬ್ಯಾಂಕ್, ಅಂಚೆ ಇಲಾಖೆ ಹಣಕಾಸು ಸೇವೆಗಳು, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಪಿಂಚಣಿ, ಫೋನ್ ಬಿಲ್, ವಿದ್ಯುತ್ ಬಿಲ್ ಪಾವತಿ, ಪಾನ್ ಕಾರ್ಡ್, ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ, ಅಡುಗೆ ಅನಿಲ ಸಿಲಿಂಡರ್ ಕೂಡ ಪಡೆದುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ 19,888 ನ್ಯಾಯಬೆಲೆ ಅಂಗಡಿಗಳಿದ್ದು, 1,14,70,607 ಬಿಪಿಎಲ್ ಕಾರ್ಡುದಾರರು, 24,32,284 ಎಪಿಎಲ್ ಹಾಗೂ 10,96,992 ಅಂತ್ಯೋದಯ ಕಾರ್ಡುದಾರರಿದ್ದಾರೆ.