ಆರ್‌ಆರ್‌ಆರ್ ತಂಡದೊಂದಿಗೆ ಅಸಮಾಧಾನಗೊಂಡಿರುವ ವದಂತಿಗಳನ್ನು ನಟಿ ಆಲಿಯಾ ಭಟ್ ತಳ್ಳಿಹಾಕಿದ್ದಾರೆ.
ಸೀಮಿತ ಪರದೆಯ ಸಮಯದಿಂದಾಗಿ ಆರ್‌ಆರ್‌ಆರ್ ತಂಡದೊಂದಿಗೆ ನಟಿ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅಂತಹ ಎಲ್ಲಾ ವರದಿಗಳನ್ನು ಆಲಿಯಾ ತಳ್ಳಿಹಾಕಿದ್ದು, ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ ಹೇಳಿದ ಅವರು, ತನಗೆ ನೀಡಿದ ಅವಕಾಶಕ್ಕಾಗಿ ಇಡೀ ತಂಡಕ್ಕೆ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಯಾರೂ ಕೂಡ ಸುಖಾಸುಮ್ಮನೆ ಊಹೆಗಳನ್ನು ಮಾಡಬೇಡಿ ಎಂದು ಎಲ್ಲರಿಗೂ ನಟಿ ಪ್ರಾಮಾಣಿಕವಾಗಿ ವಿನಂತಿಸಿದ್ದಾರೆ. ತಾನು ಆರ್‌ಆರ್‌ಆರ್ ಚಿತ್ರದ ಭಾಗವಾಗಿರುವುದಕ್ಕೆ ಶಾಶ್ವತವಾಗಿ ಕೃತಜ್ಞಳಾಗಿದ್ದೇನೆ. ತಾನು ಸೀತೆಯಾಗಿರಲು ಇಷ್ಟಪಟ್ಟೆ. ರಾಜಮೌಳಿ ಅವರ ನಿರ್ದೇಶನವನ್ನು ಇಷ್ಟಪಟ್ಟೆ. ಅಲ್ಲದೆ, ತಾರಕ್ ಮತ್ತು ಚರಣ್ ಜೊತೆ ಕೆಲಸ ಮಾಡಲು ಇಷ್ಟಪಟ್ಟೆ. ಈ ಚಿತ್ರದಲ್ಲಿ ತನ್ನ ಅನುಭವದ ಪ್ರತಿಯೊಂದು ವಿಷಯವನ್ನೂ ಇಷ್ಟಪಟ್ಟಿದ್ದಾಗಿ ಅವರು ತಿಳಿಸಿದ್ದಾರೆ.
ಈ ಸುಂದರವಾದ ಚಲನಚಿತ್ರಕ್ಕೆ ಜೀವ ತುಂಬಲು ನಿರ್ದೇಶಕರು ವರ್ಷಗಳ ಪ್ರಯತ್ನ ಮತ್ತು ಶಕ್ತಿಯನ್ನು ಹಾಕಿದ್ದಾರೆ. ಹೀಗಾಗಿ ಯಾವುದೇ ವದಂತಿಗಳು ಹಬ್ಬಲು ಇಷ್ಟಪಡುವುದಿಲ್ಲ ಎಂದು ಆಲಿಯಾ ಭಟ್ ತಿಳಿಸಿದ್ದಾರೆ.