ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಗೆ ತಮಿಳುನಾಡು ಸರ್ಕಾರ ವೈ ಶ್ರೇಣಿ ಭದ್ರತೆ ಒದಗಿಸಿದೆ.
ಅಣ್ಣಾಮಲೈ ಗೆ ಭದ್ರತೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಅವರಿಗೆ ವೈ ಶ್ರೇಣಿ ಭದ್ರತೆ ನೀಡಲಾಗಿದೆ. ಈ ಮೂಲಕ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಶಸ್ತ್ರ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸರು ದಿನದ 24 ಗಂಟೆಗಳ ಕಾಲ ಅಣ್ಣಾಮಲೈಗೆ ರಕ್ಷಣೆ ನೀಡಲಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡು ಬಿಜೆಪಿ ಕಚೇರಿಯಲ್ಲಿ ಪೆಟ್ರೋಲ್ ತುಂಬಿದ ಬಾಟಲ್ ಗಳನ್ನು ಎಸೆದಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ತಮಿಳುನಾಡು ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ಫೋನ್ ಕದ್ದಾಲಿಸುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದರು. ಐಪಿಎಸ್ ಹುದ್ದೆ ತೊರೆದು ರಾಜಕೀಯವಾಗಿ ಗುರುತಿಸಿಕೊಂಡಿರುವ ಅಣ್ಣಾಮಲೈ ಅವರಿಗೆ ಭದ್ರತಾ ಭೀತಿ ಹಿನ್ನೆಲೆಯಲ್ಲಿ ವೈ ಶ್ರೇಣಿ ಭದ್ರತೆ ಕಲ್ಪಿಸಲಾಗಿದೆ.