ಬೆಂಗಳೂರು: ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ವಿಚಾರವಾಗಿ ಹಿಂದೂ ಪರ ಸಂಘಟನೆ, ಬಜರಂಗದಳದ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ ಘಟಕ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ನಿಮ್ಮಿಂದ ಯಾವ ಸಂಘಟನೆ, ವ್ಯಕ್ತಿಯೂ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದೆ.
ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ರಾಜಕೀಯ ವರಸೆ. ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ “ಪುರುಷಾರ್ಥ” ಅಡಗಿದೆಯೇ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ.
ಮಾನ್ಯ ಲಕ್ಕಿ ಡಿಪ್ ಸಿಎಂ ಕುಮಾರಸ್ವಾಮಿ ಅವರೇ, ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು. ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ ಎಂದು ಗುಡುಗಿದೆ.
ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ.
ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‌ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ. ಕುರ್ಚಿಗಾಗಿ ಮಾತು ಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ? ಪ್ರಶ್ನಿಸಿದೆ.