ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಪ್ರದೇಶ ಹೆಸರನ್ನು ಮರುನಾಮಕರಣ ಮಾಡಲು ಹೆಸರುವಾಸಿಯಾಗಿದೆ. ಇದೀಗ ಬಿಜೆಪಿ ಸಂಸದ ಮುಖೇಶ್ ರಜಪೂತ್ ಫರೂಕಾಬಾದ್ ಜಿಲ್ಲೆಯನ್ನು ಪಾಂಚಾಲ್ ನಗರ ಅಥವಾ ಅಪರ್ಕಾಶಿ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಂಸದ ಮುಖೇಶ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ. ರಜಪೂತರು ಮಹಾಭಾರತದ ಕಾಲದಲ್ಲಿ ಈ ಪ್ರದೇಶವನ್ನು ಪಾಂಚಾಲ ಎಂದು ಕರೆಯಲಾಗುತ್ತಿತ್ತು. ಇದು ಪಾಂಡವ ರಾಣಿ ದ್ರೌಪದಿಯ ತಂದೆ ದ್ರುಪದ್ ಆಳ್ವಿಕೆ ನಡೆಸಿದ ರಾಜ್ಯವಾಗಿದೆ. ರಾಜ ದ್ರುಪದನ ರಾಜಧಾನಿ ಕಂಪಿಲ್ ಆಗಿದ್ದು, ಇದೇ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ್ದರು. ಜೊತೆಗೆ ಇದು ದ್ರೌಪದಿಯ ಸ್ವಯಂವರ ನಡೆದ ಸ್ಥಳವಾಗಿದೆ ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.
ಜಿಲ್ಲೆಯ ಇತಿಹಾಸದ ಕುರಿತು ಮಾತನಾಡಿದ ಅವರು, ಗಂಗಾ, ರಾಮಗಂಗಾ ಮತ್ತು ಕಾಳಿ ನದಿಗೆ ಸಮೀಪದಲ್ಲಿರುವ ಫರೂಕಾಬಾದ್‌ನ ಇತಿಹಾಸವು ಪುರಾಣ ಕಾಲದಿಂದಲೂ ಶ್ರೀಮಂತವಾಗಿದೆ. ಈ ಪ್ರದೇಶದಲ್ಲಿ ರಾಜ ದ್ರುಪದನ ಸೈನ್ಯವು ನೆಲೆಸಿತ್ತು. ಇಲ್ಲಿ ಇಂದು, ರಜಪೂತ್ ರೆಜಿಮೆಂಟ್ ಮತ್ತು ಸಿಖ್ ರೆಜಿಮೆಂಟ್ ಎಂಬ ಎರಡು ರೆಜಿಮೆಂಟಲ್ ಕೇಂದ್ರಗಳಿವೆ.
ಹಿಂದೂಗಳು ಮತ್ತು ಜೈನರಿಗೆ ಕಂಪಿಲ್ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ರಜಪೂತ್ ವಿವರಿಸಿದ್ದಾರೆ. ಮೊದಲ ಜೈನ ತೀರ್ಥಂಕರ ಋಷಭದೇವ ಇಲ್ಲಿ ಪ್ರವಚನ ನೀಡಿದ್ದರು. ಸಂಕಿಸ್ಸಾ ಬೌದ್ಧರಿಗೆ ವಿಶ್ವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಶ್ರೀಲಂಕಾ, ಕಾಂಬೋಡಿಯಾ, ಥೈಲ್ಯಾಂಡ್, ಬರ್ಮಾ (ಮ್ಯಾನ್ಮಾರ್) ಮತ್ತು ಜಪಾನ್‌ನಂತಹ ದೇಶಗಳು ಇಲ್ಲಿ ದೊಡ್ಡ ಬೌದ್ಧ ವಿಹಾರಗಳನ್ನು ನಿರ್ಮಿಸಿವೆ ಎಂದು ಬಿಜೆಪಿ ಸಂಸದರು ಬರೆದಿದ್ದಾರೆ.
ಕಾಶಿಯಂತೆ ಶಿವಾಲಯಗಳು (ಶಿವನ ದೇವಾಲಯಗಳು) ಪ್ರತಿ ಬೈಲೇನ್‌ನಲ್ಲಿ ಅಸ್ತಿತ್ವದಲ್ಲಿವೆ. ಆದ್ದರಿಂದ, ಈ ನಗರವನ್ನು (ಫರೂಕಾಬಾದ್) ಅಪರ್ಕಾಶಿ ಎಂದೂ ಕರೆಯುತ್ತಾರೆ ಎಂದು ಬಿಜೆಪಿ ಸಂಸದರು ವಿವರಿದ್ದಾರೆ.
1714ರಲ್ಲಿ, ಮೊಘಲ್ ದೊರೆ ಫರುಖ್ಸಿಯರ್ ನಗರದ ಹೆಸರನ್ನು ಫರೂಕಾಬಾದ್ ಎಂದು ಬದಲಾಯಿಸಿದ್ದರು. ಆದ್ದರಿಂದ, ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಫರೂಕಾಬಾದ್ ಜಿಲ್ಲೆಯ ಹೆಸರನ್ನು ಪಾಂಚಾಲ್ ನಗರ ಅಥವಾ ಅಪರ್ಕಾಶಿ ಎಂದು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಯೋಗಿ ಆದಿತ್ಯನಾಥ್ ರಾಜ್ಯದ ಹಲವಾರು ಸ್ಥಳಗಳನ್ನು ಮರುನಾಮಕರಣ ಮಾಡಿದ್ದಾರೆ. ಫೈಜಾಬಾದ್ ಮತ್ತು ಅಲಹಾಬಾದ್ ಜಿಲ್ಲೆಗಳನ್ನು ಕ್ರಮವಾಗಿ ಅಯೋಧ್ಯೆ ಮತ್ತು ಪ್ರಯಾಗ ರಾಜ್ ಎಂದು ಮರುನಾಮಕರಣ ಮಾಡಲಾಯಿತು.